ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಳಗಾವಿ: ಕೋರೆ ಹತ್ಯೆಯತ್ನ: ಆರೋಪಿಗೆ ೧೨ ವರ್ಷ ಶಿಕ್ಷೆ

ಬೆಳಗಾವಿ: ಕೋರೆ ಹತ್ಯೆಯತ್ನ: ಆರೋಪಿಗೆ ೧೨ ವರ್ಷ ಶಿಕ್ಷೆ

Sat, 31 Oct 2009 02:56:00  Office Staff   S.O. News Service
ಬೆಳಗಾವಿ, ಅಕ್ಟೋಬರ್ 31: ರಾಜ್ಯಸಭಾ ಸದಸ್ಯ, ಕೆ‌ಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲು ಯತ್ನಿಸಿದ್ದ ಅವರ ಅಣ್ಣನ ಮಗ ಜಗದೀಶ್ ಕೋರೆಗೆ ನ್ಯಾಯಾಲಯ ೧೨ ವರ್ಷ ಕಠಿಣ ಶಿಕ್ಷೆ, ೯ ಲಕ್ಷ ರು. ದಂಡ ವಿಧಿಸಿದೆ.
 
ಕಳೆದ ೫ ತಿಂಗಳಿಂದ ವಿಚಾರಣೆ ನಡೆಸಿದ ಬೆಳಗಾವಿಯ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ ಅಂಗಡಿ ಶುಕ್ರವಾರ ಈ ತೀರ್ಪು ನೀಡಿದರು. ಆದರೆ, ಜಗದೀಶ್‌ಗೆ ಪಿಸ್ತೂಲ್ ಕೊಟ್ಟ ಆರೋಪದಿಂದ ಅಂಕಲಿ ರಾಜೇಂದ್ರ ಅಶ್ವತ್ಥಪುರ ಮತ್ತು ಹುಬ್ಬಳ್ಳಿಯ ಶ್ರೀನಿವಾಸ ಪಿ. ಪುಟ್ಟಣ್ಣರನ್ನು ಮುಕ್ತಗೊಳಿಸಲಾಯಿತು. 
ವಿಚಾರಣೆ ವೇಳೆ ೧೩೩ ದಾಖಲೆಗಳು, ೨೫ ಸಾಮಗ್ರಿ ಹಾಗೂ ೪೧ ಸಾಕ್ಷಿಗಳನ್ನು ಪರಿಶೀಲಿಸಲಾಯಿತು. ಇಷ್ಟು ಕಡಿಮೆ ಅವಧಿಯಲ್ಲಿ ವಿಚಾರಣೆ ಮುಗಿದಿರುವುದು ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ಶಿಕ್ಷೆ ವಿಧಿಸಿರುವುದು ಬೆಳಗಾವಿಯ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ. 
 
ಮೇ ೨೧, ೨೦೦೯ರಂದು ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಸರ್ಕಾರದ ಪರ ಆರ್.ಎನ್.ಚಾಟೆ ವಕಾಲತ್ತು ವಹಿಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ೨೦೦೬ರ ಅ. ೧೯ರಂದು ಅಂಕಲಿಯ ಮಯೂರ ಚಿತ್ರಮಂದಿರದಲ್ಲಿ ಪ್ರಭಾಕರ ಕೋರೆ ಮೇಲೆ ಅವರ ಸ್ವಂತ ಅಣ್ಣನ ಮಗ ಜಗದೀಶ್ ಕೋರೆ (೪೯) ೪ ಗುಂಡು ಹಾರಿಸಿದ್ದರು. ಒಂದು ಗುಂಡು ದೇಹಕ್ಕೆ ತಾಗಿ ಹೊರ ಹೋಗಿದ್ದರೆ, ಆಸ್ಪತ್ರೆಯಲ್ಲಿ ೨ ಗುಂಡು ಹೊರತೆಗೆಯಲಾಗಿತ್ತು.

೧ ಗುಂಡು ಇನ್ನೂ ಅವರ ದೇಹದಲ್ಲೇ ಉಳಿದುಕೊಂಡಿದೆ. 

ಸೌಜನ್ಯ: ಕನ್ನಡಪ್ರಭ


Share: