ಭಟ್ಕಳ: ಅಂಕೋಲಾದ ಅಚವೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹೋಗಲು ಬರುತ್ತಿದ್ದ ಕಂದಾಯ ಸಚಿವ ಆರ್. ಅಶೋಕ ಅವರನ್ನು ಪಟ್ಟಣದ ಕೋಟೇಶ್ವರ ನಗರದಲ್ಲಿ ದಲಿತ ಮುಖಂಡರು ಭೇಟಿಯಾಗಿ ತಮ್ಮ ಅಹವಾಲುಗಳನ್ನು ತೊಡಗಿಕೊಂಡರು.
ಈ ಸಂದರ್ಭದಲ್ಲಿ ಸಚಿವರ ಬಳಿ ಮಾತನಾಡಿದ ದಲಿತ ಮುಖ೦ಡ ತುಳಸಿದಾಸ ಪವಸ್ಕರ್, ನೈಜ ಪರಿಶಿಷ್ಟರಲ್ಲದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವುದರಿಂದ ನಮ್ಮ ಹಕ್ಕನ್ನು ಕಸಿದಂತಾಗುತ್ತದೆ. ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಪಡೆದು ನಮ್ಮ ಹಕ್ಕುಗಳನ್ನು ಹಗಲುದರೋಡೆ ಮಾಡಿದ್ದಾರೆ. ಮೀನುಗಾರ ಮೊಗೇರರರು ಪ್ರವರ್ಗ-1 ರಲ್ಲಿರುವ ಮೇಲ್ವರ್ಗದವರಾದರೆ, ದಕ್ಷಿಣ ಕನ್ನಡದಲ್ಲಿರುವ ಮೊಲಬೇಟೆಯಾಡುವ ಪ್ರಸ್ತುತ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೊಗೇರರು ನೈಜ ಪರಿಶಿಷ್ಟರಾಗಿದ್ದಾರೆ. ಪೆಟ್ಟಿಯಲ್ಲಿ ಸಮಾನಾಂತರ ಹೆಸರಿನಿಂದ ದರುಪಯೋಗಪಡಿಸಿಕೊಳ್ಳಲಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್ ಅಶೋಕ, ದಲಿತರ ಕೋಟಾವನ್ನು ಯಾವುದೇ ರೀತಿಯಲ್ಲಿ ದುರುಪಯೋಗವಾಗಲು ಸರ್ಕಾರ ಬಿಡುವುದಿಲ್ಲ. ಈಗಾಗಲೇ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ಸಂವಿಧಾನದಲ್ಲಿರುವ ಅಂಶಗಳನ್ನು ಗಮನಿಸಿದಾಗ ಶೇ.0.01ರಷ್ಟು ಬದಲಾವಣೆ ಮಾಡಲು ನಮಗೆ ಹಕ್ಕಿಲ್ಲ, ಯಾವುದೇ ಸಮುದಾಯವನ್ನು ಪರಿಶಿಷ್ಟರ ಪೆಟ್ಟಿಗೆ ಸೇರಿಸುವುದಕ್ಕೆ ಕೂಡ ಹಕ್ಕಿಲ್ಲದಿರುವಾಗ ಬೇರೆ ಜಾತಿಯನ್ನು ಸೇರಿಸುವ ಪ್ರಶ್ನೆಯೇ ಇಲ್ಲ. ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಸಚಿವರೊಂದಿಗೆ ಶಾಸಕ ಸುನೀಲ ನಾಯ್ಕ ಕೂಡ ಉಪಸ್ಥಿತರಿದ್ದರು.