ಹಾವೇರಿಃಮಾ.೧೧: ಕುಟುಂಬ ವ್ಯವಸ್ಥೆಯಲ್ಲಿ ಸೌಹಾರ್ದಯುತ ಜೀವನ ಇಂದಿನ ಅಗತ್ಯವಾಗಿದೆಯೆಂದು ಹಾವೇರಿ ಜಿಲ್ಲಾ ನ್ಯಾಯಾಧೀಶ ಶ್ರಿ ರಾಮಕೃಷ್ಣಯ್ಯ ಅವರು ಪ್ರತಿಪಾದಿಸಿದ್ದಾರೆ.
ಅವರು ಇಂದು ಹಾವೇರಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವ್ಯವಸ್ಥೆಗೊಳಿಸಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-೨೦೦೫ ಹಾಗೂ ದತ್ತು ಕಾಯ್ದೆ ಕುರಿತು ಇಲಾಖಾ ಸಿಬ್ಬಂದಿ ಹಾಗೂ ಮಹಿಳಾ ಸೇವಾ ಸಂಘಟನೆಗಳಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಯಾವುದೇ ವಿಷಯಕ್ಕೆ ಪರಸ್ಪರ ದೂಷಣೆಯಲ್ಲಿ ತೊಡಗದೇ ಸಮಸ್ಯೆಯನ್ನು ವಿಮರ್ಶಿಸಿ ಸರ್ವಸಮ್ಮತ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ವಿವೇಕ ಅಡಗಿದೆ. ಇದರಿಂದ ಕುಟುಂಬದಲ್ಲಿ ಸುಖ ಮತ್ತು ಶಾಂತಿ ನೆಲೆಸಬಲ್ಲದು. ಇಲ್ಲದಿದ್ದಲ್ಲಿ ಬದುಕು ಅಸಹನೀಯವಾಗುತ್ತದೆ. ದುರಾದೃಷ್ಟದಿಂದ ಈ ಸೌಹಾರ್ದ ಸಾಧ್ಯವಾಗದಿದ್ದಲ್ಲಿ, ನೊಂದ ಮಹಿಳೆಯ ನೆರವಿಗಾಗಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-೨೦೦೫ ಕಾನೂನು ವರದಾನವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಾರದಾ ಹಾದಿಮನಿ ಅವರು ಆಸ್ತಿ ಆಸೆಗಾಗಿ ಮಕ್ಕಳನ್ನು ದತ್ತು ನೀಡುವ, ದತ್ತು ಪಡೆದವರನ್ನು ಕಡೆಗಣಿಸುವ ಪರಂಪರೆ ಸಮಾಜದಲ್ಲಿ ಇನ್ನೂ ಉಳಿದುಕೊಂಡಿದೆ. ಈ ಅನಿಷ್ಟ ಪರಂಪರೆ ತೊಲಗಬೇಕಾದರೆ, ದತ್ತು ಪಡೆದುಕೊಳ್ಳುವರು ಕಡ್ಡಾಯವಾಗಿ ಅನಾಥ ಮಕ್ಕಳನ್ನೇ ದತ್ತು ಪಡೆದುಕೊಳ್ಳವಂತಾಗಬೇಕು ಎಂದು ಸಲಹೆ ಮಾಡಿದರಲ್ಲದೆ, ಹಣದ ಆಸೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡುವ ಪತ್ನಿ ಪೀಡಕರ ವಿರುದ್ಧ ಸಮಾಜ ಕಠೋರವಾಗಿ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದರು.
ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ ೧೯೫೬ರ ಕುರಿತು ಉಪನ್ಯಾಸ ನೀಡಿದ ಹಾವೇರಿಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಬಿ.ವೆಂಕಟೇಶ ಅವರು, ದತ್ತು ಸ್ವೀಕಾರದಲ್ಲಿ ಚಾಲ್ತಿಯಲ್ಲಿದ್ದ ಧಾರ್ಮಿಕ ಮತ್ತಿತರ ಉದ್ದೇಶಗಳ ದಿಕ್ಕನ್ನೇ ಬದಲಿಸಿರುವ ಈ ಕಾಯ್ದೆ, ಜಾತ್ಯಾತೀತ ಮತ್ತು ಸಮಾನತಾ ತತ್ವವನ್ನೊಳಗೊಂಡು ಪ್ರಗತಿಪರವಾಗಿದೆ. ಈ ಕಾನೂನು ಜಾರಿಗೆ ಮುಂಚೆ ಮಹಿಳೆಯನ್ನು ದತ್ತು ತೆಗೆದುಕೊಳ್ಳಲು ಅವಕಾಶವಿರಲಿಲ್ಲ. ಈ ಕಾನೂನಿನ ಅಡಿಯಲ್ಲಿ ದತ್ತು ತೆಗೆದುಕೊಳ್ಳಲು ಅಂಗ ವೈಕಲ್ಯ ಕೂಡ ಅಡ್ಡಬಾರದು. ಕಾನೂನಿನ ಜ್ಞಾನವಿದ್ದಲ್ಲಿ ವ್ಯಾಜ್ಯಗಳೂ ದೂರವಾಗುತ್ತವೆ. ಈ ಹಿನ್ನೆಲೆಯಲ್ಲಿ ದತ್ತು ನಿಯಮಗಳನ್ನು ಸರಿಯಾಗಿ ಅನುಸರಿಸಿ, ಆಸ್ತಿ ವಿವಾದಗಳಿಂದ ದೂರವಿರಬೇಕು ಎಂದೂ ಅವರು ಸಲಹೆಮಾಡಿದರು.
ಹಾವೇರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಧುಮತಿ ಮಾಗಾವಿ ಅವರು ಮಾತನಾಡಿ, ತಮ್ಮ ಸಮಿತಿ ಜಿಲ್ಲೆಯಲ್ಲಿ ಅನಾಥ ಇಲ್ಲವೆ ತಂದೆ ಅಥವಾ ತಾಯಿ ಇಲ್ಲದ ಮಕ್ಕಳು ಸಿಕ್ಕಲ್ಲಿ ಅವರನ್ನು ರಾಣೇಬೆನ್ನೂರಿನಲ್ಲಿರುವ ಬಾಲ ಮಂದಿರದಲ್ಲಿ ಸ್ವೀಕರಿಸಿ, ೧೮ನೇ ವಯಸ್ಸಿನವರೆಗೆ ಹಾಸ್ಟೇಲ್ನಲ್ಲಿ ಇರಿಸಿ ಪೋಷಿಸಲಾಗುತ್ತಿದೆ. ಅನಾಥ ಮಕ್ಕಳನ್ನು ದತ್ತು ನೀಡುವ ಪ್ರಸಂಗ ಬಂದಾಗ ತಮ್ಮ ಸಂಸ್ಥೆ ಅನಾಥ ಮಕ್ಕಳು ದತ್ತು ನೀಡಲು ಮುಕ್ತವಿರುವಬಗ್ಗೆ ಪ್ರಮಾಣಪತ್ರ ನೀಡುವ ಅಧಿಕಾರಯುತ ಸಮಿತಿಯಾಗಿದೆ ಎಂದರಲ್ಲದೆ, ಸಮಿತಿಯ ವಸತಿಯಿಂದ ಕೈಕೊಂಡ ಶಿಶು ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದರು.
ಶಿಶು ಗೃಹಗಳ ನಿರ್ವಹಣೆ ಮತ್ತು ಕಾನೂನು ಮಾರ್ಗಸೂಚಿಗಳ ಕುರಿತು ಧಾರವಾಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಲಲಿತಾ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಹಾವೇರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸುನಂದಾ ಮಡಿವಾಳರ ಅವರು ಉಪನ್ಯಾಸ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಪ್ರಭಾವತಿ ಕರ್ನಿಂಗ ಅವರು ನಮ್ಮ ಸಮಾಜ ವ್ಯವಸ್ಥೆಯಲ್ಲಿ ವ್ಯಕ್ತಿಯ ಹಕ್ಕುಗಳ ಬಗ್ಗೆ ಅರಿವು ಮೂಡುತ್ತಿದ್ದರೂ ಪಾಲಕರು ತಮ್ಮ ಹೆಣ್ಣು ಮಗುವನ್ನು ಮಧ್ಯದಲ್ಲೇ ಶಾಲೆ ಬಿಡಿಸುವ, ಒತ್ತಾಯದ ಮದುವೆಮಾಡುವ, ಇಲ್ಲವೆ ವಿಧವೆಯಾಗಿದ್ದಲ್ಲಿ ಹಿಂಸಿಸುವ ಪ್ರವೃತ್ತಿ ಇನ್ನೂ ಕಡಿಮೆಯಾಗಿಲ್ಲ. ಇಂಥ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳ ನೆರವಿಗೆ ಕೌಟುಂಬಿಕ ದೌರ್ಜನ್ಯ ಕಾಯಿದೆ ಇದೆ. ಅದೇ ರೀತಿ, ಒಂದು ಮಗು ಸಿಕ್ಕರೆ ಕಾನೂನಿನ ಪೂರ್ವಾಪರ ಯೋಚಿಸದೇ ಮಗುವನ್ನು ಸಾಕುವ ಪ್ರವೃತ್ತಿ, ಸಮಾಜದಲ್ಲಿದೆ. ಕಾಲಾಂತರದಲ್ಲಿ ತಮಗೆ ಮಕ್ಕಳಾದಲ್ಲಿ ಸಿಕ್ಕ ಮಗುವನ್ನು ಜೀತಕ್ಕೆ ತಳ್ಳುವ ಪ್ರವ್ಲತ್ತಿಯನ್ನೂ ತಳ್ಳಿಹಾಕಲಾಗದು. ಇಂಥ ಸಂದರ್ಭದಲ್ಲಿ ಮಗುವನ್ನು ಸಾಕುವಾಗಲೇ ಕಾನೂನಿನಂತೆ ದತ್ತು ಸ್ವೀಕರಿಸಿದರೆ, ಆ ಮಗುವಿಗೆ ಸ್ವಂತ ಮಗನಂತೆ ಸಮಾನ ಸ್ಥಾನಮಾನ ಮತ್ತು ಹಕ್ಕು ಪ್ರಾಪ್ತವಾಗುವ್ಯದರಿಂದ, ಅಂಥ ಮಕ್ಕಳ ಶೋಷಣೆ ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಅರಿವು ಮೂಡಿಸಲು ಇಲಾಖಾ ಸಿಬ್ಬಂದಿ ಮತ್ತು ಮಹಿಳಾ ಸೇವಾ ಸಂಸ್ಥೆಗಳ ಸದಸ್ಯರಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆಯೆಂದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶ್ರೀ ಹೆಚ್.ಜಿ.ಶ್ರೀವರ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಡಿ.ವೈ.ಎಸ್.ಪಿ.ಶ್ರೀ ಸಿಂಗದ ಅವರು ಪಾಲ್ಗೊಂಡಿದ್ದರು.
ನಂತರ ಎರಡೂ ಕಾಯ್ದೆಗಳ ಕುರಿತು ಪ್ರತ್ಯೇಕ ಗುಂಪು ಚರ್ಚೆ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಸಾಂತ್ವನ ಮಹಿಳಾ ಸ್ವಾವಲಂಬನ ಕೇಂದ್ರ, ಹಾವೇರಿಯ ಇಡಾರಿ ಸಂಸ್ಥೆ, ಬಂಕಾಪುರದ ಸ್ಪಂದನಾ ಅಸೋಶಿಯೇನ್ನ ಸದಸ್ಯರು, ತಾಲೂಕು ಆರೋಗ್ಯಾಧಿಕಾರಿ ಡಾ|| ಪ್ರಭಾಕರ ಕುಂದೂರ, ಎಲ್ಲ ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು, ಇಲಾಖಾ ಪರಿವೀಕ್ಷಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಕೀಲರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಹಾನಗಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಬಿ.ಆರ್.ಶೆಟ್ಟರ ವಂದಿಸಿದರು. ಕಚೇರಿ ಅಧೀಕ್ಷಕರಾದ ಶ್ರೀಮತಿ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು