ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ:ಕಟ್ಟಡ ಕಾರ್ಮಿಕರ ನಿವೃತ್ತಿ ವೇತನ ಹೆಚ್ಚಿಸುವಂತೆ ಎ‌ಐಟಿಯುಸಿ ಆಗ್ರಹ

ಬಂಟ್ವಾಳ:ಕಟ್ಟಡ ಕಾರ್ಮಿಕರ ನಿವೃತ್ತಿ ವೇತನ ಹೆಚ್ಚಿಸುವಂತೆ ಎ‌ಐಟಿಯುಸಿ ಆಗ್ರಹ

Sat, 28 Nov 2009 19:01:00  Office Staff   S.O. News Service
ಬಂಟ್ವಾಳ,ನವೆಂಬರ್ ೨೮: ದೇಶದಲ್ಲಿ ಕೋಟ್ಯಾಂತರ ಸಂಖ್ಯೆಯ ಕಾರ್ಮಿಕರು ಕಟ್ಟಡ ನಿರ್ಮಾಣ ಮತ್ತು ಅದರ ಪೂರಕ ಕೆಲಸದಲ್ಲಿ ನಿರತರಾಗಿದ್ದಾರೆ. ಸದ್ರಿ ಕಾರ್ಮಿಕರಿಗೆ ಹಿತರಕ್ಷಣಾ ಕಾಯ್ದೆ ಕಾನೂನು ಸವಲತ್ತುಗಳು ಜ್ಯಾರಿಯಾಗಿದ್ದರೂ ಸಹ ಇವರಲ್ಲಿ ಬಹುಪಾಲು ಜನ ಕಾರ್ಮಿಕರು ಈ ಕಾಯ್ದೆ ಕಾನೂನುಗಳ ಬಗ್ಗೆ ಅರಿವಿಲ್ಲದೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕ್ಷೇಮ ಮಂಡಳಿಗೆ ಸದಸ್ಯತ್ವ ನೊಂದಾಯಿಸಿ ಫಲಾನುಭವಿ ಗುರುತು ಕಾರ್ಡು  ಪಡೆಯುವಲ್ಲಿ ಆಸಕ್ತಿ ವಹಿಸದಿರುವುದು ಖೇದನೀಯ ಎಂದು ಕಾರ್ಮಿಕ ಮುಖಂಡ, ಸಿಪಿ‌ಐ ಜಿಲ್ಲಾ ಕಾರ್ಯದರ್ಶಿ ಪಿ.ಸಂಜೀವರವರು ಹೇಳಿದರು.

ಅವರು ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಎ‌ಐಟಿಯುಸಿ ಆಶ್ರಯದಲ್ಲಿ ಜರುಗಿದ ತಾಲೂಕು ಕಟ್ಟಡ ಕಾರ್ಮಿಕರ ಸಮಾವೇಶವನ್ನುದ್ಧೇಶಿಸಿ ಮಾತನಾಡುತ್ತಿದ್ದರು. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಅಸಂಘಟಿತರಾಗಿದ್ದು, ಸಾಮಾಜಿಕ ಭದ್ರತೆಯಿಲ್ಲದೆ ದುಡಿಯುವವರಾಗಿದ್ದಾರೆ. ದೊಡ್ಡ ದೊಡ್ಡ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವಾಗ ಅಪಘಾತ ಸಂಭವಿಸಿ ಮರಣ ಹೊಂದುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಪರಿಹಾರ, ಅಂಗವಿಕಲತೆಯ ಪರಿಹಾರ, ಪಿಂಚಣಿ ಸೌಲಭ್ಯ ಈ ಕಾರ್ಮಿಕರಿಗೆ ವರದಾನವಾಗಲಿದೆ. ಆ ನಿಟ್ಟಿನಲ್ಲಿ ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಸರಕಾರ ರಚಿಸಿರುವ ಕ್ಷೇಮ ಮಂಡಳಿಯ ಸದಸ್ಯರಾಗಿ ನಿಯಾಮಾವಳಿಗಳಿಗೆ ಬದ್ಧರಾಗಿ ಕಾನೂನು ರೀತ್ಯಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನಿಡಿದರು.
 
ಆನಂತರ ಎ‌ಐಟಿಯುಸಿ ರಾಜ್ಯ ಮುಖಂಡ ಕಟ್ಟಡ ಕಾರ್ಮಿಕರ ಜಿಲ್ಲಾ ಸಂಘದ ಅಧ್ಯಕ್ಷರಾದ ಕಾ|| ಬಿ. ವಿಶ್ವನಾಥ ನಾಕ್ ಮಾತನಾಡಿ ಕಾರ್ಮಿಕರ ಹಿತರಕ್ಷಣೆಗೆ ಕಟಿ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಎ‌ಐಟಿಯುಸಿ ಕಳೆದ ೯ ದಶಕಗಳಿಂದಲೂ ಶೋಷಣೆಗೊಳಗಾದ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡಲು ನಿರಂತರವಾದ ಹೋರಾಟ ನಡೆಸಿಕೊಂಡು ಬಂದಿದೆ. ಅಂತಹ ಹೋರಾಟದ ಪರಂಪರೆಯ ಸಂಘಟನೆಯಡಿಯಲ್ಲಿ ಕಾರ್ಮಿಕರೆಲ್ಲರೂ ಒಗ್ಗೂಡುವ ಮೂಲಕ ತಮ್ಮ ಹಕ್ಕು ಬಾಧ್ಯತೆಗಳನ್ನು ರಕ್ಷಿಸಲು ಮುಂದಾಗಬೇಕು. ಮಾತ್ರವಲ್ಲ ಮಾಲಿಕ ವರ್ಗ, ಆಳುವ ಸರಕಾರಗಳು ಕಾರ್ಮಿಕರ ಮತ್ತು ಬಹುಸಂಖ್ಯಾತ ಜನರ ಆಶಯಗಳಿಗೆ ಸ್ಪಂದಿಸದಿದ್ದರೆ ಹೋರಾಟ, ಚಳುವಳಿ ನಡೆಸುವುದು ಅನಿವಾರ್‍ಯವಾಗಿದೆ ಎಂದು ಹೇಳಿದರು.
 
ಸಮಾವೇಶದಲ್ಲಿ ಕಟ್ಟಡ ಕಾರ್ಮಿಕರ ನಿವೃತ್ತಿ ವೇತನವನ್ನು ಈಗಿರುವ ರೂ ೩೦೦/- ರಿಂದ ೧೦೦೦/- ಕ್ಕೆ ಹೆಚ್ಚಿಸಬೇಕು.
ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತದಿಂದ ಮರಣ ಹೊಂದಿದರೆ ಅವರ ಕುಟುಂಬಕ್ಕೆ ೨ ಲಕ್ಷ ಪರಿಹಾರ ನೀಡಬೇಕು. ವಾರೀಸುದಾರರಿಗೆ ಕುಟುಂಬ ಪಿಂಚಣಿ ನೀಡಬೇಕು.
 
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡುವ ಸಹಾಯಧನವನ್ನು ಪ್ರಾಥಮಿಕ ತರಗತಿಯಿಂದಲೇ ಪ್ರಾರಂಬಿಸಬೇಕು.
ಕಟ್ಟಡ ಕಾರ್ಮಿಕರು ಚಿಕಿತ್ಸೆಗೆ ಕೊಡುವ ಸಹಾಯಧನ ಮೊತ್ತವನ್ನು ಹೆಚ್ಚಿಸಬೇಕು. ಮತ್ತು ಆಸ್ಪತ್ರಗೆ ದಾಖಲಾಗಿ ಬಿಡುಗಡೆಯಾಗುವರೆಗಿನ ಪೂರ್ಣ ಖರ್ಚು ವೆಚ್ಛವನ್ನು ಭರಿಸಬೇಕು.
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಿಗೆ ಪೂರಕವಾದ ಪರಿಕರಗಳನ್ನು ಪೂರೈಸುವ ಕಾರ್ಮಿಕರನ್ನು ಕಾಯ್ದೆಯೊಳಗೆ ಸೇರಿಸುವ ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರ ಪ್ರಮುಖ ಬೇಡಿಕೆಗಳ ಠರಾವುಗಳನ್ನು ಅಂಗೀಕರಿಸಲಾಯಿತು.
 
ಸಮಾವೇಶದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷರಾದ ಕೆ.ಈಶ್ವರ್ ವಹಿಸಿದ್ದರು. ದ.ಕ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕೋಶಾಧಿಕಾರಿ ಎಂ ಕರುಣಾಕರ,  ಎ‌ಐಟಿಯುಸಿ ಮುಖಂಡರುಗಳಾದ ಡಿ. ಹೆನ್ರಿ ಲೋಬೋ, ಬಿ ಭಾಸ್ಕರ ಸಭೆಯನ್ನುದ್ಧೇಶಿಸಿ ಮಾತನಾಡಿದರು.  ಸಂಘದ ಪ್ರಧಾನ ಕಾರ್‍ಯದರ್ಶಿ ಬಿ. ಶೇಖರ್ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಸುರೇಶ್ ಕುಮಾರ್ ವಂದಿಸಿದರು.



ದ.ಕ. ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘ
(ಎ.ಐ.ಟಿ.ಯು.ಸಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ 
ಮತ್ತು ಕಲ್ಲು ಒಡೆಯುವ ಕ್ವಾರೆ ಕಾರ್ಮಿಕ ಸಂಘ)
(ರಿ.ನಂ ೦೭/ಬಿ.ಡಿ./೨೦೦೬)ಕ್ಕೆ ಸಂಯೋಜಿತ ಬಂಟ್ವಾಳ ತಾಲೂಕು ಘಟಕ
ಅಂಚೆ ಕಛೇರಿ ಎದುರುಗಡೆ, ಬಿ.ಸಿ.ರೋಡು- ೫೭೪೨೧೯
ಫೋನ್: ೨೩೩೧೯೯ (ಔ)
ಅಧ್ಯಕ್ಷರು: ಕೆ. ಈಶ್ವರ್
ಪ್ರಧಾನ ಕಾರ್‍ಯದರ್ಶಿ: ಬಿ.ಶೇಖರ್


Share: