ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ: ಸಿಎಂ ಬೊಮ್ಮಾಯಿ ಸಂತಾಪ

ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ: ಸಿಎಂ ಬೊಮ್ಮಾಯಿ ಸಂತಾಪ

Wed, 07 Sep 2022 06:13:17  Office Staff   SO NEWS

ಬೆಂಗಳೂರು:ಸಚಿವ ಉಮೇಶ್‌ ಕತ್ತಿ(61) ಹೃದಯಾಘಾತದಿಂದ ನಿಧನರಾಗಿದ್ದಾರೆ.ಮಂಗಳವಾರ ರಾತ್ರಿ ನಗರದ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಉಮೇಶ್‌ ಕತ್ತಿ ಅವರಿಗೆ ಹೃದಯಾಘಾತವಾಗಿದ್ದರಿಂದ ತಕ್ಷಣ ಅವರನ್ನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉಮೇಶ್‌ ಕತ್ತಿ ನಿಧನರಾಗಿದ್ದಾರೆ. 
ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಉಮೇಶ್‌ ಕತ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಉಮೇಶ್‌ ಕತ್ತಿ ಅವರ ಅಗಲಿಕೆಯ ಸುದ್ದಿ ಕೇಳಿ ಅವರ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಉಮೇಶ್ ಕತ್ತಿ ತಂದೆ ವಿಶ್ವನಾಥ್ ಕತ್ತಿಗೆ ವಿಧಾನಸಭೆಯಲ್ಲಿ ಹೃದಯಾಘಾತ ಆಗಿತ್ತು.ತೀವ್ರ ಹೃದಯಾಘಾತದಿಂದ ಬಳಲಿಗ ವಿಶ್ವನಾಥ್ ಕತ್ತಿ ವಿಧಾನಸಭೆಯಲ್ಲಿ ನಿಧನರಾಗಿದ್ದರು. ಇದೀಗ ಉಮೇಶ್ ಕತ್ತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಮೇಶ್ ಕತ್ತಿ ನಿವಾಸದಲ್ಲಿದ್ದ ವೇಳೆ ತೀವ್ರ ಅಸ್ವಸ್ಥಗೊಂಡಿದ್ದರು. ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ಹೀಗಾಗಿ ತಕ್ಷಣ ಕತ್ತಿ ಅವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕತ್ತಿ ನಿಧನರಾಗಿದ್ದಾರೆ.
ಬಿಜೆಪಿ ಸರ್ಕಾರದ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವರಾಗಿದ್ದ ಉಮೇಶ್ ಕತ್ತಿ ತಮ್ಮ ಪ್ರಖರ ಮಾತುಗಳಿಂದಲೇ ಜನಪ್ರಿಯರಾಗಿದ್ದಾರೆ. 1985ರಲ್ಲಿ ಉಮೇಶ್ ಕತ್ತಿ ತಂದೆ ವಿಶ್ವನಾಥ್ ಕತ್ತಿ ನಿಧನದ ಬಳಿಕ ರಾಜಕೀಯ ಪ್ರವೇಶಿಸಿದ ಉಮೇಶ್ ಕತ್ತಿ ಉತ್ತರ ಕರ್ನಾಟಕದ ಪ್ರಬಲ ನಾಯಕನಾಗಿ ಬೆಳೆದರು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಎಬ್ಬಿಸಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು.

ಕತ್ತಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ 

ರಾಮಯ್ಯ ಆಸ್ಪತ್ರೆಗೆ ಇದೀಗ ಬಿಜೆಪಿ ನಾಯಕರು, ಸಚಿವರು ದೌಡಾಯಿಸಿದ್ದಾರೆ. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.


Share: