ಭಟ್ಕಳ : ಮಾರುಕೇರಿಯ ಹೂತ್ಕಳದ ಶ್ರೀ ಕ್ಷೇತ್ರ ಧನ್ವಂತರಿ ಮಹಾವಿಷ್ಣುಮೂರ್ತಿ ವಿಘ್ನೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಷಾಢಶುದ್ಧ ಪ್ರಥಮ ಏಕಾದಶಿಯಂದು ಲೋಕಕಲ್ಯಾಣಾರ್ಥವಾಗಿ ಲಕ್ಷತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಸಂಪನ್ನಗೊಂಡಿತು.
ಈ ಪ್ರಯುಕ್ತ ಬೆಳಿಗ್ಗೆ ಅಭಿಷೇಕದೊಂದಿಗೆ ಸಹಸ್ರ ದೂರ್ವಾಚನೆ, ವಿಶೇಷ ಅಲಂಕಾರ ಪೂಜೆ, ಶ್ರೀ ಧನ್ವಂತರಿಯಲ್ಲಿ ಶ್ರೀಸೂಕ್ತ, ಪುರುಷಸೂಕ್ತಾದಿ ವಿಶೇಷ ಅಭಿಷೇಕಗಳು,ಕಲ್ಪೋಕ್ತ ಮಹಾಪೂಜೆ ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಪಾರಾಯಣ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ ಇವರ ನೇತೃತ್ವದಲ್ಲಿ ವೇ.ಮೂ. ಸುಬ್ರಾಯ ಭಟ್ಟ, ಶ್ರೀಧರ ಭಟ್ಟ, ಸತೀಶ ಭಟ್ಟ, ಉಮಾಶಿವ ಉಪಾಧ್ಯಾಯ, ಗುರು ಉಪಾಧ್ಯಾಯ, ಬಾಲಚಂದ್ರ ಭಟ್ಟ,ಯೋಗೇಶ ಹೆಬ್ಬಾರ, ವಿನಾಯಕ ಭಟ್ಟ, ನಾರಾಯಣ ಉಪಾಧ್ಯಾಯ, ಪ್ರಮೋದ ಭಟ್ಟ ಸೇರಿದಂತೆ 50ಕ್ಕೂ ಅಧಿಕ ಪುರೋಹಿತರು ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರು ವಿಷ್ಣು ಸಹಸ್ರನಾಮ ಓದಿದರು. ಭಾರೀ ಮಳೆಯ ಮಧ್ಯೆಯೂ ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಮಧ್ಯಾಹ್ನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯಿಂದ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕೊರೋನಾ ನಿವಾರಣೆಗಾಗಿ ಈ ಹಿಂದೆ ಸಂಕಲ್ಪಿಸಿದ ಕೋಟಿ ಧನ್ವಂತರಿ ಜಪ ನಡೆಸಲಾಯಿತು. ಸಂಜೆ ಸ್ಥಳೀಯ ಕಲಾವಿದರಿಂದ ಏರ್ಪಡಿಸಲಾದ ದ್ರೌಪದಿ ಪ್ರತಾಪ ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.