ಬಂಟ್ವಾಳ, ಏಪ್ರಿಲ್ ೧೭; ಸಂಸಾರ ಜೋಡುಮಾರ್ಗ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳ ಇದರ ಸಹಯೋಗದಲ್ಲಿ ಆಟ-ರಂಗಾಟ ಒಂದು ದಿನದ ಮಕ್ಕಳ ಕೂಟವು ಶನಿವಾರ ಬಿ.ಸಿ ರೋಡಿನಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ತಮ್ಮಯ್ಯ ರವರು ಹಿಂದಿನ ಕಾಲದ ಹುಲಿ ಒಡಿಸುವ ಸಾಧನವನ್ನು ತಿರುಗಿಸಿ ಶಬ್ದ ಹೊರಡಿಸುವ ಮೂಲಕ ಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ರಜಾದಿನಗಳನ್ನು ಪಠ್ಯೇತರ ಚಟುವಟಿಕೆಗಳ ಜೊತೆಜೊತೆಗೆ ಉತ್ಸಾಹದಿಂದ ಕಳೆಯಲು ಇಂತಹ ಕೂಟಗಳು ಸಹಕಾರಿ ಎಂದರು. ಕೇಂದ್ರದ ನಿರ್ದೇಶಕ ಫ್ರೊ. ತುಕಾರಾಂ ಪೂಜಾರಿಯವರು ಮಾತನಾಡಿ. ಇಂದು ಮಕ್ಕಳು ಪೆಟ್ಟಿಗೆಗಳ ಬದುಕಿಗೆ ಶರಣಾಗುತ್ತಿದ್ದಾರೆ. ಯಾಂತ್ರಿಕ ಬದುಕಿಗೆ ವಿದಾಯ ಹೇಳಿ ಬಾಲ್ಯವನ್ನು ನಿಜಾರ್ಥದೊಂದಿಗೆ ಕಳೆಯ ಬೇಕು, ಇದಕ್ಕೆ ಮಕ್ಕಳ ಹೆತ್ತವರು ಮನಸು ಮಾಡಬೇಕೆಂದರು. ಸಂಚಯಗಿರಿ ನಾಗರಿಕಾ ಕ್ರಿಯಾ ಸಮಿತಿ ಮಾಜಿ ಅಧ್ಯಕ್ಷ ರಾಘವ ಆಚಾರ್, ಎ.ದಾಮೋದರ್ , ಫ್ರೊ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು. ಬೆಳಗ್ಗಿನಿಂದ ಸಂಜೆ ತನಕ ನಡೆದ ಆಟ-ರಂಗಾಟದಲ್ಲಿ ಸಂಸಾರ ತಂಡದ ಮೌನೇಶ್ ವಿಶ್ವಕರ್ಮ, ಶಿಕ್ಷಕ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಸಂಸಾರ ತಂಡದ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.