ಬೆಳಗಾವಿ : ಹಿರಿಯ ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಅವರಿಗೆ 2022ನೇ ವರ್ಷದ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬುಧವಾರ ಮುಂದುವರಿದ ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆರ್. ವಿ. ದೇಶಪಾಂಡೆ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಕಳೆದ ವರ್ಷದಿಂದ ಆರಂಭವಾಗಿರುವ ಈ ಪ್ರಶಸ್ತಿ ಪಡೆದಿರುವ ಎರಡನೇ ಶಾಸಕರು ಇವರಾಗಿದ್ದಾರೆ. ಮೊದಲ ಪ್ರಶಸ್ತಿಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಭಾಜನರಾಗಿದ್ದರು.
ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ ಸದನದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
75 ವರ್ಷದ ಹಿರಿಯ ನಾಯಕ ಆರ್. ವಿ. ದೇಶಪಾಂಡೆ ಅವರು 1983 ರಲ್ಲಿ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದರು. ಒಟ್ಟು 8 ಬಾರಿ ಶಾಸಕರಾಗಿ ಕೆಲಸ ಮಾಡಿದ್ದು, ಒಮ್ಮೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಎಸ್ .ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ದೀರ್ಘಾವಧಿ ಕೈಗಾರಿಕಾ ಸಚಿವರಾಗಿದ್ದರು. ಪ್ರತಿಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ ಸ್ಪೀಕರ್, ಸಿಎಂ, ಶಾಸಕರು, ಸಚಿವರು ದೇಶಪಾಂಡೆ ಅವರನ್ನ ಅಭಿನಂದಿಸಿದರು.