ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಿಂದುತ್ವ ಸಂಘಟನೆಗಳ ವಿರೋಧ, ಭ್ರಷ್ಟಚಾರ ಆರೋಪಗಳ ನಡುವೆ ಸುನಿಲ್ ನಾಯ್ಕಗೆ ಟಿಕೇಟ್ ನೀಡಿದ ಬಿಜೆಪಿ

ಹಿಂದುತ್ವ ಸಂಘಟನೆಗಳ ವಿರೋಧ, ಭ್ರಷ್ಟಚಾರ ಆರೋಪಗಳ ನಡುವೆ ಸುನಿಲ್ ನಾಯ್ಕಗೆ ಟಿಕೇಟ್ ನೀಡಿದ ಬಿಜೆಪಿ

Wed, 12 Apr 2023 21:42:10  Office Staff   SOnews

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಮಂಗಳವಾರ ಅಧಿಕೃತವಾಗಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು  ಸಂಘಪರಿವಾರದ ಪ್ರಭಲ ವಿರೋಧ,ಸರ್ಕಾರದ ೨ಕೋಟಿ ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡ ಆರೋಪ, ಕಾರ್ಯಕರ್ತರ ಅಸಮಧಾನ ಭ್ರಷ್ಟಚಾರ ಆರೋಪದ ನಡುವೆಯೂ ಹಾಲಿ ಶಾಸಕ ಸುನಿಲ್ ನಾಯ್ಕರನ್ನು ಮತ್ತೇ ಟಿಕೇಟ್ ನೀಡಿ ಕಣಕ್ಕಿಳಿಸಿದೆ.

ಕಟ್ಟರ್ ಹಿಂದುತ್ವ ಕಟ್ಟಾಳು ಮೂಲ ಬಿಜೆಪಿಯ ಗೋವಿಂದ ನಾಯ್ಕರಿಗೆ ಈ ಬಾರಿ ಟಿಕೇಟ್ ಪಕ್ಕಾ ಎಂದೇ ಭಾವಿಸಲಾಗಿತ್ತು. ಏಕೆಂದರೆ ಕಳೆದ ಒಂದೆರೆಡು ತಿಂಗಳಿಂದ ಹಾಲಿಶಾಸಕ ಸುನಿಲ್ ನಾಯ್ಕರ ವಿರುದ್ಧ ಅಂತಹದ್ದೊಂದು ವಾತವರಣ ನಿರ್ಮಿಸಿದ್ದು ಇನ್ನೇನು ಟಿಕೇಟ್ ಕೈ ತಪ್ಪಿ ಹೋಯಿತು ಎಂದೇ ಭಾವಿಸಲಾಗಿತ್ತು.

ಕಟ್ಟರ್ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸುನಿಲ್ ನಾಯ್ಕರ ವಿರುದ್ಧ ಪತ್ರಿಕಾಗೋಷ್ಟಿ ನಡೆಸಿ ಬಹಿರಂಗವಾಗಿ ಅಸಮಧಾನ ತೋರ್ಪಡಿಸಿದ್ದರು. ಅಲ್ಲದೆ ಇವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿಕೊಂಡ ರೆಸಾರ್ಟ್‌ಗೆ ಸರ್ಕಾರದ ೨ಕೋಟಿ ರೂ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತರೊಬ್ಬರು ಬಹಿರಂಗವಾಗಿಯೆ ಆರೋಪಿಸಿದ್ದರು. ಈ ಎಲ್ಲ ಸನ್ನಿವೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಧ್ಯಮಗಳು ಈ ಬಾರಿ ಸುನಿಲ್ ನಾಯ್ಕಗೆ ಟಿಕೆಟ್ ಮಿಸ್ ಆಗುತ್ತೆ ಎಂದೇ ಅಂದಾಜಿಸಲಾಗಿತ್ತು. ಆದರೆ ಇದಾವುದನ್ನೂ ಲೆಕ್ಕಕ್ಕ್ಕೆ ತೆಗೆದುಕೊಳ್ಳದ ಹೈಕಮಾಂಡ್ ಮಾತ್ರ ಮತ್ತೇ ಸುನಿಲ್ ನಾಯ್ಕರನ್ನೇ ಕಣಕ್ಕಿಳಿಸಿ ಪರೀಕ್ಷಿಸುತ್ತಿರುವುದು ಬಹುತೇಕ ಹಿಂದುತ್ವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಪರಿಣಾಮ ಚುನಾವಣೆಯ ಮೇಲೆ ಬೀಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸುನಿಲ್ ನಾಯ್ಕ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳು ವೈದ್ಯರ ವಿರುದ್ಧ ಕೇವಲ ೫೯೩೦ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಅದೂ ಹೊನ್ನಾವರದ ಪರೇಶ ಮೇಸ್ತಾನ ಅಕಸ್ಮಿಕ ಸಾವನ್ನು ಕೊಲೆ ಎಂದು ಬಿಂಬಿಸಿ ಅನ್ಯಕೋಮಿನವರೇ ಇದನ್ನು ಮಾಡಿದ್ದು ಎಂಬೆಲ್ಲ ಕಟ್ಟುಕತೆಗಳನ್ನು ಕಟ್ಟಿ ಅದರ ಅನುಕಂಪದಲ್ಲಿ ಹಿಂದೂ ಸಮಾಜದ ಮತಗಳನ್ನು ಪಡೆದು ಬಹಳ ಕಡಿಮೆ ಮತಗಳೊಂದಿಗೆ ಗೆಲುವು ಸಾಧಿಸಿದ್ದರು.

ಆದರೆ ಈಗ ಪರಿಸ್ಥಿತಿ ಬೇರೆಯೇ ಆಗಿದೆ. ಆಡಳಿತ ವಿರೋಧಿ ಅಲೆಯ ಜೊತೆಗೆ ಸಂಘಪರಿವಾರದ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಪ್ರಭಲ ಆರೋಪ ಎದುರಿಸುತ್ತಿರುವ ಸುನಿಲ್ ನಾಯ್ಕಗೆ ಟಿಕೆಟ್ ಕೈ ತಪ್ಪುವುದು ಶೇ.೧೦೦ ಪಕ್ಕಾ ಎಂದೇ ಭಾವಿಸಲಾಗಿತ್ತು. ಈ ನಿಟ್ಟಿನಲ್ಲಿ ಬಿಜೆಪಿ ಟಿಕೇಟ್ ನ ಮತ್ತೋರ್ವ ಆಕಾಂಕ್ಷಿ ಕಟ್ಟರ್ ಹಿಂದೂ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಗೋವಿಂದ ನಾಯ್ಕರು ತನಗೆ ಟಿಕೇಟ್ ಸಿಕ್ಕೇ ಸಿಗುತ್ತೇ ಎನ್ನುವ ಖಾತ್ರಿಯಲ್ಲಿದ್ದರು. ಈಗ ಬಿಜೆಪಿಯ ಹಿಂದೂ ಮುಖಂಡರನ್ನು ಕಡೆಗಣಿಸಿ ಕಾಂಗ್ರೇಸ್ ಪಕ್ಷದಿಂದ ವಲಸೆ ಬಂದಿರುವ ಸುನಿಲ್ ನಾಯ್ಕರಿಗೆ ಮತ್ತೊಮ್ಮೆ ಮಣೆಹಾಕಿದ್ದು ಭಟ್ಕಳ ಬಿಜೆಪಿಯಲ್ಲಿ ತಳಮಳವನ್ನುಂಟು ಮಾಡಿದೆ. ಇದು ಚುನಾವಣೆ ಫಲಿತಾಂಶದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಕಾದು ನೋಡಬೇಕಾಗಿದೆ.


Share: