ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಡುಬಿದ್ರಿ: ಬಟ್ಟೆಯಂಗಡಿ ಮತ್ತು ಮನೆಯಿಂದ ಬಟ್ಟೆಬರೆ ಹಾಗೂ ಚಿನ್ನಾಭರಣ ಕಳವು

ಪಡುಬಿದ್ರಿ: ಬಟ್ಟೆಯಂಗಡಿ ಮತ್ತು ಮನೆಯಿಂದ ಬಟ್ಟೆಬರೆ ಹಾಗೂ ಚಿನ್ನಾಭರಣ ಕಳವು

Sat, 14 Nov 2009 03:20:00  Office Staff   S.O. News Service
ಪಡುಬಿದ್ರಿ, ನವೆಂಬರ್ 13: ಇಲ್ಲಿನ ಪೇಟೆಯ ಹೃದಯ ಭಾಗದಲ್ಲಿರುವ ಬಟ್ಟೆ ಅಂಗಡಿ ಹಾಗೂ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಬಟ್ಟೆ ಬರೆ ಹಾಗೂ ಚಿನ್ನಾಭರಣಗಳನ್ನು ಕದ್ದೊಯ್ದ ಬಗ್ಗೆ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಡುಬಿದ್ರಿಯ ದೀಪಕ್ ಶೆಣೈ ಮಾಲಕತ್ವದ ಕಟಪಾಡಿಕಾರ್ ಟೆಕ್ಸ್‌ಟೈಲ್ ಅಂಗಡಿಗೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಅಂಗಡಿಯ ಮೇಲ್ಚಾವಣಿಯಲ್ಲಿನ ಕಿಟಕಿಯ ಮರದ ಸರಳುಗಳನ್ನು ತುಂಡರಿಸಿ ಒಳ ಪ್ರವೇಶಿಸಿ ಲಕ್ಷಾಂತರ ರೂ. ಬೆಲೆಬಾಳುವ ಸೀರೆ ಇನ್ನಿತರ ಬಟ್ಟೆಬರೆಯನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಕೈ-ಚೀಲದಲ್ಲಿ ತುಂಬಿಸಿಟ್ಟ ಬಟ್ಟೆಬರೆಗಳನ್ನು ಅಂಗಡಿಯ ಮಾಡಿನ ಮೇಲೆಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ ಮಾತ್ರವಲ್ಲದೆ ಅಂಗಡಿಗಿಂತ ಮಾರುದ್ದ ದೂರದಲ್ಲಿ ಕಳ್ಳ ತಾನು ತೊಟ್ಟಿದ್ದ ಅಂಗಿ, ಪ್ಯಾಂಟ್, ಬೆಲ್ಟ್ ನೊಂದಿಗೆ ಟಾರ್ಚ್ ಲೈಟೊಂದನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ಆತ ತನ್ನ ಹಳೆ ಬಟ್ಟೆಯನ್ನು ತೆಗೆದು ಕಳವುಗೈದ ಹೊಸ ಬಟ್ಟೆಯನ್ನು ಧರಿಸಿಕೊಂಡು ಹೋಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಎಲ್ಲೂರು ಗ್ರಾಮದ ಅದಮಾರಿನ ಬಂಡಸಾಲೆಯ ಸೋಮಪ್ಪ ಮೂಲ್ಯ ಎಂಬವರ ಮನೆಗೂ ನುಗ್ಗಿದ ಕಳ್ಳರು ಸೋಮಪ್ಪ ಮೂಲ್ಯರ ಮನೆಯ ಮುಂಬಾಗಿಲ ಬೀಗ ಮುರಿದು ಸಾವಿರಾರು ಮೌಲ್ಯದ ಚಿನ್ನಾಭರಣ ಹಾಗೂ ಹತ್ತುಸಾವಿರ ನಗದನ್ನು ಕಳ್ಳರು ದೋಚಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರದೇಶದಲ್ಲೇ ಇರುವ ಕೆಮ್ಮುಂಡೇಲು ಭಜನಾಮಂದಿರಕ್ಕೆ ಕಳೆದೆರಡು ದಿನಗಳ ಹಿಂದೆಯಷ್ಟೇ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಸಹಿತ ನಗದು ಕಳವುಗೈದಿರುವುದು ಕೂಡಾ ಇಲ್ಲಿ ಸ್ಮರಿಸಬಹುದು.

ಚಿತ್ರ, ವರದಿ: ಹಮೀದ್ ಪಡುಬಿದ್ರಿ

Share: