ಭಟ್ಕಳ: ಮಕ್ಕಳು ಸಮಾಜಕ್ಕೆ, ದೇಶಕ್ಕೆ, ಪ್ರಪಂಚಕ್ಕೇ ಒಳಿತನ್ನು ಮಾಡುವಂತಹ ವ್ಯಕ್ತಿಯಾಗಿ ಬೆಳೆಯಲಿ ಎನ್ನುವ ಆಸೆಯಿಂದ ತಂದೆ-ತಾಯಿಯರು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಹೊನ್ನಾವರ ಹೇಳಿದರು. ಅವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕöÈತಿಕ-ಶೈಕ್ಷಣಿಕ-ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ತಂದೆ ತಾಯಿ ತನ್ನ ಮಗು ತಮಗಷ್ಟೇ ಮೀಸಲೆಂದು ಭಾವಿಸದೇ ಮಗು ತಮ್ಮ ಸಂಸಾರಕ್ಕೂ, ಊರಿಗೂ, ರಾಜ್ಯ, ದೇಶ, ವಿಶ್ವಕ್ಕೂ ಒಳಿತನ್ನು ಮಾಡಬೇಕೆಂದು ಬಯಸುತ್ತಾರೆ. ನೀವು ಈಗ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ, ಮುಂದಿನ ಎಪ್ಪತ್ತು ವರ್ಷ ನೆಮ್ಮದಿಯಿಂದ ಬದುಕಬಹುದು ಎನ್ನುತ್ತಾ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮಿಗಳು ರಚಿಸಿದ ಕವನದ ಮೂಲಕ ಮಕ್ಕಳಿಗೆ ಜೀವನದ ಸ್ಪೂರ್ತಿಯನ್ನು ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಪ್ರತಿಷ್ಟಾನದ ಕಾರ್ಯದರ್ಶಿ ಹಾಗೂ ಶಾಲೆಯ ಪ್ರಾಂಶುಪಾಲ ಎಚ್. ಶರಣಕುಮಾರ್ ವಹಿಸಿದ್ದರು.
ಜೀವನದಲ್ಲಿ ಸಾಧನೆಗೆ ದೊರೆಯುವ ಕಾಲ ಅಲ್ಪವಾದರೂ ಕೂಡಾ ಅದರಲ್ಲಿಯೇ ಸಾಧಕರಾಗಿ ನಿಮ್ಮ ಪಾಲಕರಿಗೆ, ನೀವು ಕಲಿತ ಶಾಲೆಗೆ, ನಿಮ್ಮ ಊರಿಗೆ, ದೇಶಕ್ಕೆ ಹೆಮ್ಮೆ ತರುವಂತವರಾಗಿ ಎಂದೂ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಕರ್ನಾಟಕ ಬ್ಯಾಂಕ್ ಹಿರಿಯ ಶಾಖಾ ಪ್ರಬಂಧಕ ಶರತ್ ಆರ್. ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಾ ಸ್ಪರ್ಧೆಗಳಲ್ಲಿ ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಎರಡು ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ತಿಳಿದು ಸಂತೋಷವಾಯಿತು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಪತ್ರಕರ್ತ ರಾಧಾಕೃಷ್ಣ ಭಟ್ಟ ಭಟ್ಕಳ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಯುಕ್ತಾ ಸ್ವಾಗತಿಸಿದಳೂ, ಅಹನಿ ಕಾರ್ಯಕ್ರಮ ನಿರೂಪಿಸಿದಳು. ಭವ್ಯಶ್ರೀ ಶೆಟ್ಟಿ ವಂದಿಸಿದಳು. ಶಿಕ್ಷಕಿಯರಾದ ರಂಜಿತಾ, ಶೈಲಜಾ, ವಿದ್ಯಾ, ಸುಶ್ಮಿತಾ, ಪ್ರತೀಕ್ಷಾ, ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಉಪ ಪ್ರಾಂಶುಪಾಲ ರಾಮ ದೇವಡಿಗ ಸಹಕರಿಸಿದರು.