ಧಾರವಾಡ : ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಸ್ವ-ಸಹಾಯ ಸಂಘದ ಮಹಿಳಾ ಪ್ರತಿನಿಧಿಗಳಿಗೆ ಸರ್ಕಾರ ಕೊಡುವ ಅನುದಾನವನ್ನು ಪ್ರತಿ ಗುಂಪಿನವರು ಸದುಪಯೋಗಪಡಿಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಸ್ವ-ಉದ್ಯೋಗಕ್ಕೆ ಸ್ವಾವಲಂಬನೆ ಆಧಾರ ಸ್ಥಂಭವಾಗಿದೆ ಎಂದು ನವಲಗುಂದ ತಾಲೂಕಿನ ಸಹಾಯಕ ಸಿ.ಡಿ.ಪಿ.ಓ ಸುನೀತಾ ಪಾಟೀಲ ಹೇಳಿದರು.
ಅವರು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಯೋಜಿಸಿದ್ದ 4ನೇ ತಂಡದ ಇಡಿಪಿ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿ.ಟಿ.ಪಿ.ಸಿ. ಸಹಾಯಕ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ ಮಾತನಾಡಿ, ಸ್ವ-ಸಹಾಯ ಸಂಘದ ಮುಖಾಂತರ ಮಾಡುವ ಗುಣಮಟ್ಟದ ವಸ್ತುಗಳನ್ನು ಹೊರದೇಶಗಳಿಗೆ ರಫ್ತು ಮಾಡುವ ಕುರಿತು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಡಾಕ್‍ನ ಜಂಟಿ ನಿರ್ದೇಶಕ ಚಂದ್ರಶೇಖರ ಹೆಚ್. ಅಂಗಡಿ ಮಾತನಾಡಿ, ಮಹಿಳೆಯರು ಇಟ್ಟುಕೊಂಡಿರುವ ಗುರಿ ಸಾಧನೆ, ಸತತ ಪ್ರಯತ್ನ ಹಾಗೂ ಕಾಯಕದಲ್ಲಿ ಶ್ರದ್ಧೆ ಇತ್ಯಾದಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರತಿಯೊಬ್ಬ ಶಿಬಿರಾರ್ಥಿಗಳು ಒಂದು ಯಶೋಗಾಥೆಯನ್ನು ಸಮಾಜಕ್ಕೆ ಕೊಡಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ರಾಜಶೇಖರ ಪಾಟೀಲ ಪಾಲ್ಗೊಂಡಿದ್ದರು. ಸಿಡಾಕ್ ತರಬೇತಿದಾರ ಮೌನೇಶ ಆರ್.ಬಡಿಗೇರ ಸ್ವಾಗತಿಸಿ, ನಿರೂಪಿಸಿದರು. ಸಿಡಾಕ್ ತರಬೇತಿದಾರ ರೋಹಿಣಿ ಘಂಟಿ ವಂದಿಸಿದರು.