ಕಾರವಾರ : ಸ್ಕಿಜೋಫ್ರೀನಿಯಾ ಖಾಯಿಲೆಗಳ ಬಗ್ಗೆ ಹಾಗೂ ಮಾನಸಿಕ ರೋಗಿಗಳಿಗೆ ಕಾನೂನು ಅಡಿಯಲ್ಲಿ ಸಿಗುವ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅವಶ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಹಾಂತೇಶ ದರಗದ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಛೇರಿ ಸಭಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ರೋಗಿಗಳು ಗುಣಮುಖರಾಗಿ ಸಹಜ ಜೀವನ ನಡೆಸುತ್ತಿದ್ದಾರೆ. ನಮ್ಮ ಮನಸ್ಸು ಸದೃಢವಾಗಿದ್ದಲ್ಲಿ ಸ್ಕಿಜೋಫ್ರೀನಿಯಾವಲ್ಲದೆ ಯಾವುದೇ ಕಾಯಿಲೆಯನ್ನೂ ದೂರ ಮಾಡಬಹುದು ಎಂದು ತಿಳಿಸಿದರು.
ಬಳಿಕ ಡಿ.ಎಮ್.ಓ ಡಾ. ರಮೇಶ ರಾವ್ ಮಾತನಾಡಿ, ಖಾಯಿಲೆಯ ಬಗ್ಗೆ ಇರುವ ಮೂಡನಂಬಿಕೆ ಹಾಗೂ ಕಳಂಕಗಳನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅನಿವಾರ್ಯವಾಗಿದೆಎಂದು ಹೇಳಿದರು.
ಬಳಿಕ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಶಂಕರ್ ರಾವ್ ಪ್ರಾಸ್ತಾವಿಕವಾಗಿ ಅಂಕಿ ಅಂಶಗಳ ಸಮೇತ ಸ್ಕಿಜೋಫ್ರೀನಿಯಾ ಕುರಿತಾಗಿ ಮಾಹಿತಿ ನೀಡಿದರು. ಮನೋರೋಗ ತಜ್ಞವೈದ್ಯರು, ಕ್ರಿಮ್ಸ್, ಡಾ. ಅಕ್ಷಯ ಪಾಟಕ್, ರೋಗಲಕ್ಷಣಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ್, ಡಿ.ಟಿ.ಓ. ಡಾ. ಮಂಜುನಾಥ, ಟಿ.ಹೆಚ್.ಓ ಕಾರವಾರ ಪ್ರಭಾರ ಡಾ.ಸುದಿತಾ ಪೆಡ್ನೇಕರ್, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ವಿಜಯಕೃಷ್ಣ ಜೇ ನಾಯಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಎಸ್. ಕನ್ನಕ್ಕನವರ, ಕ್ಲಿನಿಕಲ್ ಸೈಕೋಲಾಜಿಸ್ಟ, ಲತಾ ಇ ನಾಯ್ಕ ಹಾಗೂ ಪ್ರಜ್ವಲ್ ಡಿ ಠಾಣೇಕರ್ ಮತ್ತು ಇತರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.