ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆ ಬಿಡಿಎ ಆಯುಕ್ತ ಎತ್ತಂಗಡಿ

ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆ ಬಿಡಿಎ ಆಯುಕ್ತ ಎತ್ತಂಗಡಿ

Sat, 27 Aug 2022 17:01:32  Office Staff   Vb

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಸ್ಥಾನದ ಹೆಚ್ಚುವರಿ ಹೊಣೆಗಾರಿಕೆಯನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್ ಅವರಿಗೆ ವಹಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಆರೋಪ ರಾಜೇಶ್ ಅವರ ಮೇಲಿದೆ.

ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯನ್ನು 2021ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ನಿರ್ಬಂಧಿಸಿದ್ದರೂ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಆರ್‌ಎಂವಿ (ಎರಡನೇ ಹಂತ ಎಕ್ಸ್‌ಟೇಷನ್) ಬಡಾವಣೆಯಲ್ಲಿ ಕೋಟ್ಯಂತರ ರೂ.ಮೌಲ್ಯದ ಬದಲಿ ನಿವೇಶನಗಳನ್ನು ಗೃಹ ಸಚಿವ ಆರಗಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಹಂಚಿಕೆ ಮಾಡಿದ ಆರೋಪ ಅವರ ಮೇಲಿದೆ. 

ನಿವೇಶನ ವಾಪಸ್ ಪಡೆಯುತ್ತೇವೆ: ಗಣ್ಯರಿಗೆ ಅಭಿವೃದ್ಧಿ ಹೊಂದಿದ ಪರ್ಯಾಯ ನಿವೇಶನ ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬಿಡಿಎದಲ್ಲಿರುವ ಕೆಳ ಹಂತದ ಅಧಿಕಾರಿಗಳು ಈ ವಿಚಾರದಲ್ಲಿ ಎಡವಟ್ಟು ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬಿಡಿಎ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ. ಅಲ್ಲದೆ, ಅವರಿಂದ ನಿವೇಶನವನ್ನು ವಾಪಸ್ ಪಡೆಯುತ್ತೇವೆ.
 ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷ

ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈಸಂಬಂಧ ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು, ಬಿಡಿಎ ಅಧಿಕಾರಿಗಳ ಧೋರಣೆಗೆ ಕಿಡಿಕಾರಿತು. ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಬಳಿಕ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಆದೇಶವನ್ನು ಮಾರ್ಪಾಡು ಮಾಡುವಂತೆ ಬಿಡಿಎ ಮನವಿ ಸಲ್ಲಿಸಿತ್ತು. ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು, ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಳಿಕ ಬಿಡಿಎ ಆಯುಕ್ತರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಜಿ ಕೆಟಗಿರಿ ನಿವೇಶನ ಹಂಚಿಕೆಯೇ ಅಕ್ರಮ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, ಬಿಡಿಎ ಆಯುಕ್ತ ರಾಜೇಶ್ ಗೌಡ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಅವರಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶಗಳ ಬಗ್ಗೆ ಗೌರವವೇ ಇಲ್ಲ. ಇಂದಿನಿಂದ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವಂತಿಲ್ಲ ಎಂದು ಆದೇಶ ನೀಡಿತು.


Share: