ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಕಾವಲು ಪಡೆಯ ವಶದಲ್ಲಿದ್ದ ಲಕ್ಷಾಂತರ ರೂಪಾಯಿ ಸ್ಪೋಟಕಗಳ ನಾಶ

ಭಟ್ಕಳ:ಕಾವಲು ಪಡೆಯ ವಶದಲ್ಲಿದ್ದ ಲಕ್ಷಾಂತರ ರೂಪಾಯಿ ಸ್ಪೋಟಕಗಳ ನಾಶ

Thu, 12 Nov 2009 02:56:00  Office Staff   S.O. News Service
ಭಟ್ಕಳ, ನವೆಂಬರ್ 11: ಕಳೆದೊಂದು ತಿಂಗಳ ಅವಧಿಯಲ್ಲಿ ಕ್ವಾರಿಗಳ ತಾಣ ಶಿರಾಲಿ ಬಂಗಾರಮಕ್ಕಿಯ ಬಳಿ ಕರಾವಳಿ ಕಾವಲುಪಡೆಯವರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಸ್ಪೋಟಕ ಸಾಮಗ್ರಿಗಳನ್ನು ಬೆಂಗಳೂರಿನಿಂದ ಆಗಮಿಸಿದ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳದ ಸಿಬ್ಬಂದಿಗಳು ಬುಧವಾರ ಕಟಗಾರಕೊಪ್ಪ ಗುಡ್ಡದ ಪ್ರದೇಶದಲ್ಲಿ ನಾಶಗೊಳಿಸಿದರು.
 11_bkl_explosives_2.jpg
11_bkl_explosives_3.jpg 
 
ಸುಮಾರು 3000 ಕ್ಕೂ ಅಧಿಕ ಇಲೆಕ್ಟ್ರಿಕಲ್ ಹಾಗೂ ನಾನ್ ಇಲೆಕ್ಟ್ರಿಕಲ್ ಡಿಟೋನೇಟರ್‌ಗಳು ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಸಿದ ಸರಣಿ ಸ್ಪೋಟಗಳಲ್ಲಿ ನಾಶಗೊಂಡರೆ, 12 ಕ್ವಿಂಟಾಲಿಗೂ ಅಧಿಕ ಭಾರದ ಅಮೋನಿಯಮ್ ನೈಟ್ರೇಟ್‌ನ್ನು ನೀರಿನೊಂದಿಗೆ ವಿಲೀನಗೊಳಿಸಲಾಯಿತು. ಈ ಕಾರ್ಯಕ್ಕಾಗಿ ಬೆಂಗಳೂರಿನ ಬಾಂಬ್ ನಿಷ್ಕ್ರೀಯ ದಳದ ನಾಲ್ಕು ಸಿಬ್ಬಂದಿಗಳೊಂದಿಗೆ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಕೈಜೋಡಿಸಿದರು. ಈ ಸಂದರ್ಭದಲ್ಲಿ ಕರಾವಳಿ ಕಾವಲುಪಡೆಯ ಸಿಪಿ‌ಐ ಪ್ರಮೋದರಾವ್, ಎಸೈ ನಂದೀಶ ಮುಂತಾದವರು ಉಪಸ್ಥಿತರಿದ್ದರು. ಅನಧಿಕೃತ ಸ್ಪೋಟಕ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿ ಕಾವಲು ಪಡೆಯ ಪೊಲೀಸರು ೨ ಜನರನ್ನು ಬಂಧಿಸಿದ್ದು, ಒಟ್ಟೂ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.

Share: