ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

Thu, 14 Apr 2022 23:40:50  Office Staff   E S NEWS

ಬೆಂಗಳೂರು:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಸಬೇಕು ಮತ್ತು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಇಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಸಲೀಂ ಅಹಮ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಪ್ರಿಯಾಂಕ್ ಖರ್ಗೆ , ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಮುಖ್ಯಮಂತ್ರಿ ಅವರ ಸರ್ಕಾರಿ ನಿವಾಸಕ್ಕೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕಲೆತ್ನಿಸಿದರು.
ಪೊಲೀಸರು ಕಾಂಗ್ರೆಸ್ ನಾಯಕರನ್ನು ಪಂಡಿತಾರಾಧ್ಯ ವೃತ್ತದ ಬಳಿಯೇ ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ರ್ಯಾಲಿ ಮುಂದೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬ್ಯಾರಿಕೇಡ್ ಹತ್ತಿ ಆ ಕಡೆ ಜಿಗಿಯುವ ಮೂಲಕ ಮುಖ್ಯಮಂತ್ರಿ ಅವರ ಮನೆಯತ್ತ ನುಗ್ಗಲೆಯತ್ನಿಸಿದರು. ಸಲೀಂ ಅಹಮ್ಮದ್, ಸುರ್ಜೆವಾಲ ಅವರಿಗೆ ಸಾಥ್ ನೀಡಿದರು.
ತಳ್ಳಾಟ, ನೂಕಾಟ ಜೋರಾದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಕೆಲವು ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ಬಲ ಪ್ರಯೋಗದ ಮೂಲಕ ತಮ್ಮ ವಶಕ್ಕೆ ತೆಗೆದುಕೊಂಡು ಪೊಲೀಸ್ ವಾಹನ ಹತ್ತಿಸಿದರು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ ಸೇರಿದಂತೆ ಅನೇಕ ನಾಯಕರನ್ನೂ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂತೋಷ್ ಪಾಟೀಲ್ ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದರು. ಆದರೆ, ಅವರದೇ ಪಕ್ಷದ ಕಾರ್ಯಕರ್ತರೂ ಆಗಿರುವ ಗ್ರಾಪಂ ಅಧ್ಯಕ್ಷ ಲೋಕೇಶ್ ಸಾಕ್ಷ್ಯ ಹೇಳಿರುವ ಪ್ರಕಾರ, ಸಚಿವ ಈಶ್ವರಪ್ಪ ಅವರನ್ನು ಸಂತೋಷ್ ಹಲವು ಬಾರಿ ಭೇಟಿ ಮಾಡಿದ್ದಾರೆ.

ಈ ವೇಳೆ ಕಾಮಗಾರಿ ಕೈಗೊಳ್ಳಲು ಸಚಿವರು ಮೌಖಿಕ ಆದೇಶ ನೀಡಿದ್ದಾರೆ. ಅದರ ಪ್ರಕಾರ ಸಂತೋಷ್ ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡಿದ್ದಾರೆ. ಈಗ ಈಶ್ವರಪ್ಪ ಸಂತೋಷ್ ಯಾರು ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಒಪ್ಪತಕ್ಕದ್ದಲ್ಲ ಎಂದರು.
ಸಂತೋಷ್ ಕಾಮಗಾರಿ ಆರಂಭ ಮಾಡುವ ಮುನ್ನ ಅಲ್ಲಿ ಬ್ಯಾನರ್ ಹಾಕಿ ಸ್ಥಳೀಯ ಅಕಾರಿಗಳಿಂದ ಪೂಜೆ ಮಾಡಿಸಿದ್ದಾರೆ. ಅಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಆತ್ಮಹತ್ಯೆ ಬಳಿಕ ಸಂತೋಷ್ ಅವರ ಪತ್ನಿ ಹಾಗೂ ತಾಯಿ ಈಶ್ವರಪ್ಪ ಅವರ ಮೇಲೆ ನೇರ ಆರೋಪ ಮಾಡಿದ್ದಾರೆ. ಈ ಪ್ರಕರಣ ನ್ಯಾಯಾಲಯದ ಉಸ್ತುವಾರಿಯಲ್ಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ನಾಯಕರೊಂದಿಗೆ ನಿನ್ನೆ ಸಂತೋಷ್ ಪಾಟೀಲ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಈ ವೇಳೆ ತಮ್ಮೊಂದಿಗೆ ಮಾತನಾಡಿದ ಸಂತೋಷ್ ಅವರ ಪತ್ನಿ ಹಾಗೂ ತಾಯಿ, ಈಶ್ವರಪ್ಪ ಅವರ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಶೇ.40ರಷ್ಟು ಕಮಿಷನ್ ಕೇಳಿದ್ದರಿಂದಾಗಿಯೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಭ್ರಷ್ಟಾಚಾರ ಈ ಹಿಂದೆಯೇ ಇರಬಹುದು. ಆದರೆ, ಶೇ.40ರಷ್ಟು ಕಮಿಷನ್ ಹಿಂದೆಂದೂ ಇರಲಿಲ್ಲ. ಸಂತೋಷ್ 4 ಕೋಟಿ ಕಾಮಗಾರಿ ಮಾಡಲು ಸಾಲ ಮಾಡಿಕೊಂಡಿದ್ದರು. ಅದರ ಮೇಲೆ ಶೇ.40ರಷ್ಟು ಕಮಿಷನ್ ನೀಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಂತೋಷ್ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಈಶ್ವರಪ್ಪ ಮತ್ತು ಅವರ ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಬೇಕು ಮತ್ತು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಬಂಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಏಳು ತಂಡಗಳನ್ನು ರಚಿಸಿದ್ದು, ನಾಳೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಐದು ದಿನಗಳ ವರೆಗೆ ಪ್ರತಿಭಟನೆ ನಡೆಸಲಾಗುವುದು. ನಂತರ ಕ್ಷೇತ್ರ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಥಮಿಕ ತನಿಖಾ ವರದಿಯ ಅಗತ್ಯವಿಲ್ಲ. ಎಫ್‍ಐಆರ್ ದಾಖಲಾಗುತ್ತಿದ್ದಂತೆ ಕ್ರಮ ಕೈಗೊಳ್ಳಬೇಕಿತ್ತು. ಮುಖ್ಯಮಂತ್ರಿಯವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ಈಶ್ವರಪ್ಪ ಅವರನ್ನು ರಕ್ಷಿಸಲಾಗುತ್ತಿದೆ. ಈ ಸರ್ಕಾರವೇ ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ರಣದೀಪ್‍ಸಿಂಗ್ ಸುರ್ಜೆವಾಲ ಮಾತನಾಡಿ, ಕರ್ನಾಟಕದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಉಲ್ಲಂಘನೆಯಾಗುತ್ತಿದೆ. ಸಚಿವರ ವಿರುದ್ಧ ಕೊಲೆ ಪ್ರಕರಣ ದಾಖಲಾದ ಬಳಿಕವೂ ಅವರು ಸಂಪುಟದಲ್ಲಿ ಮುಂದುವರೆಯುತ್ತಿರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಇಂದಿನಿಂದ ಅಭಿಯಾನ ಪ್ರಾರಂಭಿಸುತ್ತಿದೆ. ಇದು ರಾಜಕೀಯ ಹೋರಾಟವಲ್ಲ. ಭ್ರಷ್ಟಾಚಾರದ ವಿರುದ್ಧ ಸಂಘರ್ಷ. ರಾಜ್ಯದ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು. ರ್ಯಾಲಿ ಆರಂಭಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸಿದರು. ಮಹಾತ್ಮಗಾಂೀಜಿ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು.


Share: