ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಾಧ್ಯತೆಗಳ ನಗರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

ಸಾಧ್ಯತೆಗಳ ನಗರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

Sat, 09 Jul 2022 13:53:24  Office Staff   SO News

ಬೆಂಗಳೂರು : ಸಾಧ್ಯತೆಗಳ ನಗರವಾಗಿರುವ ಬೆಂಗಳೂರು, ದೇಶದಲ್ಲೇ, ವಿಮಾನ ನಿರ್ಮಾಣಕ್ಕೆ ಬೇಕಾಗುವ ಅಗತ್ಯಗಳನ್ನು ಪೂರೈಸುವ ಪ್ರಮುಖ ತಾಣವಾಗಿದ್ದು, ಅತಿ ಶೀಘ್ರದಲ್ಲಿಯೇ ಪೂರ್ಣಪ್ರಮಾಣದ ವಿಮಾನ ನಿರ್ಮಾಣ ಮಾಡುವ ಕಾರ್ಯಕ್ಕೂ ಸಹ ಬೆಂಗಳೂರು ಸಾಕ್ಷಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ. ಎಸ್. ಬೊಮ್ಮಾಯಿ ಅವರು ತಿಳಿಸಿದರು.

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೆಐಎಡಿಬಿ ಪ್ರದೇಶದಲ್ಲಿ ಸಫ್ರಾನ್ ಗ್ರೂಪ್ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಆಯೋಜಿಸಿರುವ ಸಫ್ರಾನ್ ಹಾಲ್ ಏರ್‍ಕ್ರಾಫ್ಟ್ ಇಂಜಿನ್‍ಗಳ ಸೌಲಭ್ಯಗಳ ಉದ್ಘಾಟಿಸಿ, ಅವರು ಮಾತನಾಡಿದರು.

  ಬೆಂಗಳೂರು ನಗರದಲ್ಲಿ ಹೆಚ್.ಎ.ಎಲ್., ಇಸ್ರೋ, ಎನ್.ಎ.ಎಲ್., ಹೆಚ್.ಎಂ.ಟಿ., ಬಿ.ಹೆಚ್.ಇ.ಎಲ್., ನಂತಹ ಮತ್ತಿತರ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ತಾಂತ್ರಿಕತೆಯನ್ನು ತಂದಂತಹ ಸಂಸ್ಥೆಗಳಾಗಿದೆ ಎಂದರು. 

  ಮನುಷ್ಯನ ಜೀವನಕ್ಕೂ ತಾಂತ್ರಿಕತೆ ಅಗತ್ಯವಾಗಿದ್ದು, ತಾಂತ್ರಿಕತೆ ಎಂಬುದು ಮನುಷ್ಯನ ಜೀವನವನ್ನು ಆಸಕ್ತಿಕರ ಹಾಗೂ ಸಾಹಸಮಯವಾಗಿಸುವ ಸಾಧನವಾಗಿದೆ ಹಾಗೂ ದೇಶದ ಬೆಳವಣಿಗೆಯಲ್ಲಿ ತಾಂತ್ರಿಕತೆ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.

  ಏರೋಸ್ಪೇಸ್ ತಂತ್ರಜ್ಞಾನ ಎಂಬುದು ವಿಭಿನ್ನವಾದ ತಾಂತ್ರಿಕತೆ ಹೊಂದಿದೆ. ರೈಟ್ ಸಹೋದರರು ಮೊದಲ ಬಾರಿಗೆ ವಿಮಾನ ಕಂಡುಹಿಡಿದ ಕುರಿತು ತಿಳಿಸಿದರಲ್ಲದೆ, ಮೊದಲ ಹಾಗೂ ಎರಡನೇ ಮಹಾಯುದ್ಧದ ನಂತರ ವೈಮಾನಿಕ ಕ್ಷೇತ್ರದ ಚಿತ್ರಣ ಬದಲಾಯಿತು ಎಂದು ಹೇಳಿದರು.

  ರಕ್ಷಣಾ ವಿಭಾಗದ ಅಗತ್ಯತೆಗಳನ್ನು ಪೂರೈಸಲು  ತಂತ್ರಜ್ಞಾನ ಎಂಬುದು ವೇಗ ನೀಡಿದ್ದು, ಇದೊಂದು ಹೊಸ ಬೆಳವಣಿಗೆಯಾಗಿದೆ. ಹೆಚ್.ಎ.ಎಲ್. ಸಂಸ್ಥೆಯು ಭವಿಷ್ಯದ ತಾಂತ್ರಿಕ ತಂತ್ರಜ್ಞರನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರಲ್ಲದೆ, ಕರ್ನಾಟಕದಲ್ಲಿ ಸೆಮಿ ಕಂಡಕ್ಟರ್‌ಗಳನ್ನು ಉತ್ಪಾದಿಸಲು ಟವರ್ ಗ್ರೂಪ್ ಆಫ್ ಕಂಪನಿ ಮತ್ತು ರೆಸಿಲಿಯನ್ ಕಂಪನಿಯೊಂದಿಗೆ ಸಹಿ ಮಾಡಲಾಗಿದ್ದು, ದೇಶದಲ್ಲೇ ಸೆಮಿ ಕಂಡಕ್ಟರ್‌ಗಳನ್ನು ಉತ್ಪಾದಿಸಲು ಸಹಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಹಾಗೂ ಈ ನಿರ್ಧಾರದ ಹಿಂದಿರುವ ಶಕ್ತಿಯೇ ಹೆಚ್.ಎ.ಎಲ್. ಮತ್ತು ಬಿ.ಇ.ಎಲ್. ಎಂದು ತಿಳಿಸಿದರು.

  ಕರ್ನಾಟಕ ರಾಜ್ಯವು ನಿರಂತರವಾಗಿ ತಾಂತ್ರಿಕವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು, ಇಲ್ಲಿ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಬೆಂಗಳೂರಿನ ಹವಾಮಾನ ಮತ್ತು ಇಲ್ಲಿನ ಜನರ ಕೌಶಲ್ಯಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿರುವ ನಗರವಾಗಲಿದೆ. ಆರ್ಥಿಕತೆ ಎಂಬುದು ಕೇವಲ ಹಣವಲ್ಲ. ಜನರ ಚಟುವಟಿಕೆಗಳನ್ನು ಸೂಚಿಸುತ್ತದೆ ಎಂದು ಹೇಳಿದರು.

  ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್. ಆರ್. ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಶಂಕರ್ ಮುನೇನಕೊಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಸಿಇಒ ಮಾಧವನ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.


Share: