ಕಾರವಾರ : ಸರ್ಕಾರ ನೀಡಿರುವ ಅನುದಾನವನ್ನು ಅವಶ್ಯಕತೆ ಇರುವ ಕಡೆ ಮತ್ತು ಉಪಯೋಗವಾಗುವ ರೀತಿಯಲ್ಲಿ ಯೋಜನೆ ಕೈಗೊಳ್ಳಲು ಸರ್ಕಾರದ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ ಸಬಾಭವನದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ನೀಡಿರುವ ಅನುದಾನವನ್ನು ಅಗತ್ಯವಿರುವ ಕಾಮಗಾರಿ, ದುರಸ್ಥಿ, ಸಾಮಗ್ರಿಗಳಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಉಪಯೋಗಿಸಲು ಸೂಚಿಸಿದರು.
ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯಿಂದ 2023-24 ಸಾಲಿನಲ್ಲಿ ಕೈಗೊಂಡಿರುವ ಕ್ರಿಯಾ ಯೋಜನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡರು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಊಟ, ಹಾಲು, ಮೊಟ್ಟೆ ಸರಿಯಾದ ಸಮಯಕ್ಕೆ ನೀಡುವುದು ಹಾಗೆಯೇ ಶೇ.100 ರಷ್ಟು ಎಲ್ಲಾ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಾದುಕೊಳ್ಳುವುದು ಶಾಲೆಗಳಲ್ಲಿ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ಮತ್ತು ಬೆಂಚ್ ಕಲ್ಪಿಸಲು ಸೂಚಿಸಿದರು. ಈಗಾಗಲೇ ಎಷ್ಟು ಡೆಸ್ಕ್ ಮತ್ತು ಬೆಂಚ್ ಇವೆ ಎಂಬುದನ್ನು ಅಧಿಕಾರಿಗಳಿಗೆ ಮಾಹಿತಿ ನೀಡಲು ಹೇಳಿದರು.
ಬಳಿಕ ಕೈಗಾರಿಕೆ ಇಲಾಖೆಯ ಗ್ರಾಮೀಣ ಕೈಗಾರಿಕಾ ವಿಭಾಗಗಳಿಂದ 2023-24 ರ ಸಾಲಿನಲ್ಲಿ ಕೈಗೊಡಿರುವ ಕ್ರಿಯಾ ಯೋಜನೆಯ ಮಾಹಿತಿಯನ್ನು ಪಡೆದುಕೊಂಡು ಹೊಲಿಗೆ ಯಂತ್ರದ ಬೇಡಿಕೆ ಮತ್ತು ಬಳಕೆ ಕಡಿಯಾಗಿರುವುದರಿಂದ ಈ ಯೋಜನೆ ಬದಲಾಗಿ ಮೊಬೈಲ್ ರಿಪೇರಿ ಕಿಟ್, ಕಂಪ್ಯೂಟರ್ ರಿಪೇರಿ ಕಿಟ್, ಬ್ಯುಟಿಪಾರ್ಲರ್ ಕಿಟ್ ಈ ರೀತಿಯ ಉಪಯೋಗವಾಗುವವಂತಹ ಯೋಜನೆಯ ಕೈಗೊಳ್ಳಲು ಸೂಚಿಸಿದರು.
ಇಲಾಖಾವಾರು 2023-24ನೇ ಸಾಲಿನಲ್ಲಿ ಕೈಗೊಂಡಿರುವ ಕ್ರಿಯಾಯೋಜನೆಯ ಮಾಹಿತಿಯನ್ನು ಪತ್ರಿಕೆ, ವೆಬ್ ಸೈಟ್ ಮೂಲಕ ಸಾರ್ವಜನಿಕರಿಗೆ ತಿಳಿಸಲು ಸೂಚಿಸಿದರು. ತಾವು ಕೈಗೊಂಡಿರುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಹೇಳಿದರು.
ಬಳಿಕ ವಯಸ್ಕರ ಶಿಕ್ಷಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಜವಳಿ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಇತರೆ ಇಲಾಖೆಯವರಿಂದ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕೈಗೊಂಡಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಪ್ರೊಬೆಷನರಿ ಐ ಎ ಎಸ್ ಅಧಿಕಾರಿ ಜುಬಿನಾ ಮಹಾಪಾತ್ರ, ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.