ಹೊಸದಿಲ್ಲಿ: ಆರ್‌ಬಿಐ ಶುಕ್ರವಾರ ತನ್ನ ಮುಖ್ಯ ಸಾಲ (ರೆಪೋ) ದರವನ್ನು 50 ಮೂಲಾಂಕಗಳಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಸಾಲ ದರವು ಕೋವಿಡ್ ಮೊದಲಿನ ಶೇ.5.40ಕ್ಕೆ ತಲುಪಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಆರ್‌ಬಿಐ ಪ್ರಯತ್ನದ ಅಂಗವಾಗಿ ಇದು ಸತತ ಮೂರನೇ ರೆಪೋ ದರ ಏರಿಕೆಯಾಗಿದ್ದು, ಅದೀಗ 2019ರಿಂದೀಚಿಗೆ ಸರ್ವಾಧಿಕ ಮಟ್ಟವನ್ನು ತಲುಪಿದೆ.
ಆರ್‌ಬಿಐನ ಮಧ್ಯಮಾವಧಿ ಗುರಿಯಾದ ಶೇ.2ರಿಂದ ಶೇ.6ಕ್ಕೆ ಹೋಲಿಸಿದರೆ ಜೂನ್ ತಿಂಗಳಿಗೆ ಚಿಲ್ಲರೆ ಹಣದುಬ್ಬರವು ಶೇ.7ರಷ್ಟಿದ್ದು, ಸಾಕಷ್ಟು ಮೇಲೆಯೇ ಇದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ರೆಪೋ ದರವನ್ನು ಶೇ.0.5ರಷ್ಟು ಹೆಚ್ಚಿಸಿದೆ.
ಈ ಏರಿಕೆಯೊಂದಿಗೆ ರೆಪೋ ದರ ಅಥವಾ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲಗಳ ಮೇಲಿನ ಬಡ್ಡಿದರ ಕೋವಿಡ್ ಪೂರ್ವದ ಶೇ.5.15ರ ಮಟ್ಟವನ್ನು ದಾಟಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಎಂಪಿಸಿಯ ಎಲ್ಲ ಆರೂ ಸದಸ್ಯರು ರೆಪೋ ದರ ಏರಿಕೆಗೆ ಒಮ್ಮತವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಮಾರುಕಟ್ಟೆಗಳನ್ನು ದಿಗ್ಧಮೆಗೊಳಿಸಿದ್ದ ದಿಢೀರ್ ಬೆಳವಣಿಗೆಯಲ್ಲಿ ಎಂಪಿಸಿಯ ಅನಿಗದಿತ ಸಭೆಯನ್ನು ನಡೆಸಿದ್ದ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕಗಳಷ್ಟು ಹೆಚ್ಚಿಸಿತ್ತು,ಜೂನ್ ನಲ್ಲಿಯೂ ಮತ್ತೆ 50 ಮೂಲಾಂಕಗಳಷ್ಟು ಏರಿಸಲಾಗಿತ್ತು. ಹಣದುಬ್ಬರಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿತ್ತಾದರೂ ಈವರೆಗೆ ಬೆಲೆಗಳು ಇಳಿಯುವ ಲಕ್ಷಣಗಳು ಕಂಡು ಬಂದಿಲ್ಲ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಎದುರಿಸುತ್ತಿರುವ ಸಂದಿಗ್ಧತೆಯ ಬಗ್ಗೆ ಮಾತನಾಡಿದ ದಾಸ್, ಬಗೆಹರಿಸಬೇಕಾದ ಆರ್ಥಿಕ ಕಳವಳಗಳ ಬಗ್ಗೆ ಒತ್ತಿ ಹೇಳುವ ಮೂಲಕ ರೆಪೋ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ಆರ್ ಬಿಐ ತನ್ನ ರೆಪೋ ದರವನ್ನು ನಿರ್ಧರಿಸುವಾಗ ಗಣನೆಗೆ ತೆಗೆದು ಕೊಳ್ಳುವ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣ ದುಬ್ಬರವು ಜೂನ್‌ನಲ್ಲಿ ಶೇ.7.01ರಷ್ಟಿತ್ತು. ಹಣದುಬ್ಬರವನ್ನು ಶೇ.2ರಿಂದ ಶೇ.6ರ ನಡುವೆ ಕಾಯ್ದುಕೊಳ್ಳುವ ಗುರಿಯನ್ನು ಆರ್‌ಬಿಐ ಹೊಂದಿದೆ. ಆದರೆ ಈ ವರ್ಷದ ಜನವರಿಯಿಂದಲೂ ಹಣದುಬ್ಬರವು ಆರ್‌ಬಿಐ ನೆಮ್ಮದಿ ಪಟ್ಟುಕೊಳ್ಳಬಹುದಾದ ಶೇ.6ರ ಮೇಲೆಯೇ ಇದ್ದು, ಈ ಪ್ರವೃತ್ತಿ ಮುಂದುವರಿಯಲಿದೆ ಎಂಬ ನಿರೀಕ್ಷೆಯನ್ನು ದಾಸ್ ವ್ಯಕ್ತಪಡಿಸಿದರು.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಕಳೆದ 15 ತಿಂಗಳುಗಳಿಂದ ಸತತವಾಗಿ ಎರಡಂಕಿಗಳಲ್ಲಿಯೇ ಉಳಿದುಕೊಂಡಿದೆ. ಜೂನ್‌ನಲ್ಲಿ ಅದು ಶೇ.15.18ರಷ್ಟಿತ್ತು.
ಪ್ರಸಕ್ತ ವಿತ್ತವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ.16.2ರಷ್ಟಿರಲ್ಲಿದ್ದು, ನಾಲ್ಕನೇ ತ್ರೈಮಾಸಿಕಕ್ಕೆ ಶೇ.4ಕ್ಕೆ ಇಳಿಯಲಿದೆ ಎಂದು ಅಂದಾಜಿಸಿರುವ ಆರ್‌ಬಿಐ,2022-23ನೇ ಸಾಲಿಗೆ ಶೇ.7.2ರ ಬೆಳವಣಿಗೆ ದರವನ್ನು ನಿರೀಕ್ಷಿಸಿದೆ. ಆದಾಗ್ಯೂ ಜಾರಿಯಲ್ಲಿರುವ ರಶ್ಯ-ಉಕ್ರೇನ್ ಯುದ್ಧದಿಂದಾಗಿ ಅಪಾಯಗಳಿವೆ ಎಂದು ದಾಸ್ ಎಚ್ಚರಿಕೆ ನೀಡಿದರು.
ಬ್ಯಾಂಕ್ ಆಫ್ ಇಂಗ್ಲೆಂಡ್ ತನ್ನಸಾಲದರವನ್ನು 50 ಮೂಲಾಂಕಗಳಷ್ಟು ಹೆಚ್ಚಿಸಿದ್ದು, ಅದು ಕಳೆದ 27 ವರ್ಷಗಳಲ್ಲಿ ಅತ್ಯಧಿಕ ಏರಿಕೆಯಾಗಿದೆ ಮತ್ತು ಇದರೊಂದಿಗೆ ಸಾಲದರ ಶೇ.1.75 ತಲುಪಿದೆ. ಇದರ ಬೆನ್ನಿಗೇ ಆರ್‌ಬಿಐ ತನ್ನ ರೆಪೋ ದರವನ್ನು ಹೆಚ್ಚಿಸಿದೆ.
ಕಳೆದ ತಿಂಗಳು ಅಮೆರಿಕದ ಫೆಡರಲ್ ರಿಸರ್ವ್ ತನ್ನ ಸಾಲದರವನ್ನು ಸತತ ಎರಡನೇ ಬಾರಿಗೆ ಶೇ.0.75ರಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಅದರ ಪ್ರಮುಖ ಸಾಲದರ ಶೇ.2.25-ಶೇ.2.5ರ ಶ್ರೇಣಿಯನ್ನು ತಲುಪಿದೆ.