ಕಾರವಾರ: ಮಾಜಿ ಸಚಿವ, ವಿದ್ಯಾ ದಾನಿ ಪ್ರಭಾಕರ್ ರಾಣೆ (81) ಅವರ ನಿಧನಕ್ಕೆ ಜನಶಕ್ತಿ ವೇದಿಕೆ ಹಾಗೂ ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಮಾಧವ ನಾಯಕ ಸಂತಾಪ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ದಿನಕರ ದೇಸಾಯಿಯವರನ್ನು ಹೊರತುಪಡಿಸಿದರೆ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದವರಲ್ಲಿ ಪ್ರಭಾಕರ್ ರಾಣೆಯವರು ಮುಂಚೂಣಿ ಸ್ಥಾನದಲ್ಲಿರುತ್ತಾರೆ. ರಾಣೆ ಅವರನ್ನ ಶೈಕ್ಷಣಿಕ ಭೀಷ್ಮ ಎಂದರೆ ತಪ್ಪಾಗಲಾರದು, ಜಿಲ್ಲೆಯಲ್ಲಿ ಶಿಕ್ಷಣ ವೃಕ್ಷವನ್ನ ನೆಟ್ಟು ಬೆಳೆಸಿದ ಹಿರಿಮೆ ಇವರದ್ದು. ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರ, ಹಣ ಗಳಿಕೆಯ ದಾರಿಯಾದಂತಾಗಿದೆ. ಆದರೆ, ರಾಣೆಯವರು ಹಣ ಮಾಡುವುದಾಗಲಿ ಅಥವಾ ಬೇರಾವುದೇ ದುರುದ್ದೇಶವಿಲ್ಲದೆ ಬಡ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣದ ಧಾರೆ ಎರೆದಿದ್ದರು ಎಂದು ಸ್ಮರಿಸಿದ್ದಾರೆ.
ಈಗಿನ ರಾಜಕಾರಣಿಗಳಿಗೆ ಮಾದರಿಯಾಗಬಲ್ಲ ರಾಜಕಾರಣಿಯಾಗಿ ರಾಣೆಯವರು ಗುರುತಿಸಿಕೊಂಡಿದ್ದರು. ಮೂರು ಬಾರಿ ಕಾರವಾರ- ಜೊಯಿಡಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅವರ ಜನಪ್ರಿಯತೆ ಮತ್ತು ಶಿಕ್ಷಣ ಕ್ಷೇತ್ರದ ಮೇಲಿನ ಪ್ರೀತಿ ಹಾಗೂ ಕೊಡುಗೆಯನ್ನ ಗಮನಿಸಿ ಅವರಿಗೆ ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಖಾತೆಯನ್ನ ಸಚಿವ ಸ್ಥಾನ ಅಂದಿನ ಸರ್ಕಾರ ವಹಿಸಿ ಕೊಟ್ಟಿತ್ತು. ಆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಗ್ರಾಮಪಂಚಾಯತಿ ಯಲ್ಲಿ ಗ್ರಂಥಾಲಯ ಇರಬೇಕು ಎಂದು ಕಾರ್ಯರೂಪಕ್ಕೆ ತಂದು ದೇಶಕ್ಕೆ ಮಾದರಿಯಾದವರು, ಕಾರವಾರ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಅವರಿಗೆ ಗುರುಗಳಾಗಿ ಇವರು ದಾರಿ ತೋರಿದ್ದರು ಎಂದು ನೆನೆದಿದ್ದಾರೆ.
ಇನ್ನು ಪ್ರಮುಖವಾಗಿ ಕಾರವಾರದಲ್ಲಿ ಸೀಬರ್ಡ್ ನಿರಾಶ್ರಿತರ ಪರವಾಗಿ, ಅವರಿಗೆ ಸಿಗಬೇಕಾದ ಪರಿಹಾರಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದ ರಾಣೆಯವರ ಕೊಡುಗೆ ಈ ಕಾರವಾರವಷ್ಟೇ ಅಲ್ಲದೆ, ಜಿಲ್ಲೆಗೆ ಅಪಾರವಿತ್ತು. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಯಂದೆ ಗುರುವನ್ನ ಕಳೆದುಕೊಂಡಿದ್ದೇವೆ : ಸೆ.5 ರಂದು ನಾವೆಲ್ಲ ಶಿಕ್ಷಕರ ದಿನವನ್ನ ಆಚರಿಸುತ್ತೇವೆ. ಗುರುಗಳಿಗೆ ಹೆಚ್ಚಿನ ಗೌರವ, ಪ್ರೀತಿ- ಆದರಗಳನ್ನ ಈ ದಿನದಲ್ಲಿ ತೋರುತ್ತೇವೆ. ಆದರೆ ಇದೇ ದಿನ ಪ್ರಭಾಕರ್ ರಾಣೆಯಂಥ ಗುರುವನ್ನ ಜಿಲ್ಲೆ ಕಳೆದುಕೊಂಡಿದ್ದು ದುಃಖದಾಯಕ ವಿಷಯ. ಗುರುಗಳೆಲ್ಲ ಸಂಭ್ರಮಿಸುವ ದಿನ ರಾಣೆಯವರ ಅಗಲಿಕೆಯ ಈ ಶೋಕದ ಸುದ್ದಿ ಅತೀವ ನೋವನ್ನುಂಟು ಮಾಡಿದೆ ಎಂದು ಮಾಧವ ನಾಯಕ ತಿಳಿಸಿದ್ದಾರೆ.