ಬೆಂಗಳೂರು: ರಾಜ್ಯ ಸರಕಾರದಲ್ಲಿ ಆರೋಗ್ಯ ಇಲಾಖೆ ಭ್ರಷ್ಟಾಚಾರದ ಅರಸ ಇದ್ದಂತೆ, ಇದಕ್ಕೆ ಕೇಂದ್ರಬಿಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆಗಿದ್ದು, ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣತಿಳಿಸಿದ್ದಾರೆ.
ಬುಧವಾರ ನಗರದ ಚಾಮರಾಜ ಪೇಟೆಯ ಗುತ್ತಿಗೆದಾರರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಲಂಚವಿಲ್ಲದೆ ಏನೂ ನಡೆಯುತ್ತಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಪ್ರಮುಖವಾಗಿ ಆರೋಗ್ಯ ಇಲಾಖೆಯಲ್ಲಿ 2 ಸಾವಿರ ಕೋಟಿ ರೂ. ಮೊತ್ತದ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಟೆಂಡ ಟೆಂಡರ್ ಗಳ ಅನುಮೋದನೆಗೆ ಸಚಿವ ಸುಧಾಕರ್ ಶೇಕಡ 5ರಷ್ಟು ಲಂಚ ಪಡೆ ಯುತ್ತಾರೆ ಎಂದು ಗಂಭೀರ್ ಆರೋಪ ಮಾಡಿದರು.
ಕೆಂಪಣ್ಣ ಕಾಂಗ್ರೆಸ್ ಏಜೆಂಟ್, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ, ಮೊಕದ್ದಮೆ ಹೂಡಲಿ, ಆದರೆ ನಾನು ಕಾಂಗ್ರೆಸ್‌ನವನೆಂದು ಸಾಬೀತು ಮಾಡಲಿ, ನಿಜವಾಗಿ ಹೇಳುವುದಾದರೆ ಸುಧಾಕರ್ ಅವರೇ ಕಾಂಗ್ರೆಸ್ ನವರು ಈಗ ಬಿಜೆಪಿ, ಮುಂದೆ ಕಾಂಗ್ರೆಸ್ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಅದೂ ಅಲ್ಲದೆ, ಸುಧಾಕರ್ ಸಂಬಂಧಿಕರೇ ಆರೋಗ್ಯ ಇಲಾಖೆಯಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆದಿದ್ದಾರೆ. ಸಚಿವರ ಪತ್ನಿಯ ಸಹೋದರ ಗುತ್ತಿಗೆ ನಿರ್ವಹಿಸುತ್ತಿದ್ದು, ಸಚಿವರ ಪತ್ನಿ ಹೂಡಿಕೆ ಮಾಡಿರುವ ದಾಖಲೆಗಳಿವೆ ಎಂದು ಕೆಂಪಣ್ಣದೂರಿದರು.