ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲಾಗದು: ಶಾಸಕ ಜೆ.ಡಿ.ನಾಯ್ಕ

ಭಟ್ಕಳ: ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲಾಗದು: ಶಾಸಕ ಜೆ.ಡಿ.ನಾಯ್ಕ

Sun, 01 Nov 2009 02:35:00  Office Staff   S.O. News Service
ಭಟ್ಕಳ, ಅಕ್ಟೋಬರ್ 31 : ಜನಸ್ಪಂದನ ಸಭೆಗೆ ನೋಡೆಲ್ ಅಧಿಕಾರಿಯೇ ಗೈರು ಎಂದರೇನು.. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಈ ರೀತಿ ಅಸಡ್ಡೆ ಭಾವನೆಯನ್ನು ಹೊಂದಿದರೆ ಅದನ್ನು ಸಹಿಸಿಕೊಳ್ಳಲು ಅಸಾಧ್ಯ. ಕೂಡಲೇ ಅವರನ್ನು ಅಮಾನತ್ತುಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಜೆ.ಡಿನಾಯ್ಕ ತಹಸೀಲ್ದಾರರ ಉಪಸ್ಥಿತಿಯಲ್ಲಿ ನಡೆದ ಬೆಂಗ್ರೆ ಪಂಚಾಯತ ವ್ಯಾಪ್ತಿಯ ಜನಸ್ಪಂದನಾ ಸಭೆಯಲ್ಲಿ ಆಗ್ರಹಿಸಿದರು.
 
ತಾಲೂಕಿನ ಗ್ರಾಮ ಲೆಕ್ಕಿಗರ ಕಚೇರಿಯಲ್ಲಿಯೇ ಭ್ರಷ್ಟಾಚಾರ ತುಂಬಿಕೊಂಡ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಕೆಲವು ಕಚೇರಿಯಲ್ಲಿ ಉಗ್ರಾಣಿಗಳ ಅಟ್ಟಹಾಸ ಮೇರೆ ಮೀರಿದೆ. ತಾವು ಈ ಹಿಂದೆ ಹೇಳಿದ ಮಾತಿಗೆ ಕೆಲವರು ಖಂಡನೆ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದ ನಾಯ್ಕ, ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸುವುದಾಗಿ ನುಡಿದರು. ಸಭೆಯಲ್ಲಿ ಸಲ್ಲಿಸಲಾದ ‘ಅತಿಕ್ರಮಣ ಖುಲ್ಲಾ’ ಅರ್ಜಿಯ ಮೇಲಿನ ಚರ್ಚೆಯತ್ತ ಮಾತನ್ನು ಹೊರಳಿಸಿದ ಅವರು, ಹೊಸ ಅತಿಕ್ರಮಣವನ್ನು ತಾವು ಬೆಂಬಲಿಸುತ್ತಿಲ್ಲ. ಆದರೆ ಹಿಂದಿನಿಂದ ದುಡಿಮೆ ಮಾಡಿಕೊಂಡ ಬಡವರನ್ನು ಎಬ್ಬಿಸಲು ಮುಂದಾಗದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮನೆ ಹಂಚಿಕೆಯ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ. ಯೋಜನೆಗಳು ಬಡವರನ್ನು ತಲುಪಲು ಕ್ರಮ ಕೈಗೊಳ್ಳುವಂತೆ ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಈ ಭಾಗದಲ್ಲಿರುವ ಕಲ್ಲು ಕ್ವಾರಿಗಳು ಬಂದ್ ಆಗಿರುವ ಬಗ್ಗೆಯೂ ಗಮನ ಹರಿಸಿದ್ದೇನೆ. ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವ ವೇಳೆಯಲ್ಲಿಯೇ ಕೆಲವರು ರಾಜಕೀಯದ ಮಾತುಗಳನ್ನಾಡುತ್ತಿರುವ ಕಾರಣ ಆ ಕೆಲಸವನ್ನು ಅವರಿಗೇ ಬಿಡುತ್ತಿದ್ದೇನೆ. ನನಗೆ ಬೇಕಾಗಿರುವುದು ಸಮಸ್ಯೆಗೆ ಪರಿಹಾರವೇ ಹೊರತು ಮತ್ತೇನಲ್ಲ. ಇದಕ್ಕೆ ತಾವೂ ಬೆಂಬಲ ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಸುಭದ್ರಾ ದೇವಾಡಿಗ, ಬೆಂಗ್ರೆ ಗ್ರಾಮಪಂಚಾಯತ ಅಧ್ಯಕ್ಷ ಜನಾರ್ಧನ ನಾಯ್ಕ, ತಹಸೀಲ್ದಾರ ಎಸ್.ಎಮ್.ನಾಯ್ಕ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಶಿರಸ್ತೇದಾರ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.


Share: