ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚರ್ಚ್ ದಾಳಿ: ರಾಜ್ಯ ಸರಕಾರ ವಜಾಕ್ಕೆ ದೇವೇಗೌಡ ಒತ್ತಾಯ

ಚರ್ಚ್ ದಾಳಿ: ರಾಜ್ಯ ಸರಕಾರ ವಜಾಕ್ಕೆ ದೇವೇಗೌಡ ಒತ್ತಾಯ

Fri, 05 Feb 2010 06:09:00  Office Staff   S.O. News Service
ಬೆಂಗಳೂರು, ಫೆ.೪: ಚರ್ಚ್ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗದ ವರದಿಯಿಂದ ಸಂಘಪರಿವಾರದ ಅಸಲಿ ಮುಖ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿ‌ಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ. 

ಗುರುವಾರ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಮಾತನಾಡಿದ ಅವರು, ಸೋಮಶೇಖರ್ ಆಯೋಗ ರಾಜ್ಯ ಸರಕಾರದ ಗುಜರಾತ್ ಮಾದರಿಯ ತುಣುಕನ್ನು ಮಾತ್ರ ಬಹಿರಂಗಪಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲೆ ರಾಜ್ಯವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಅದರಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಡೆದಿರುವ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಕಾರಣವಾಗಿರುವ ಸಂಘಟನೆಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಸಂಪೂರ್ಣ ಮಾಹಿತಿ ಇದೆ. ಇದನ್ನು ಆಧರಿಸಿ ಕೇಂದ್ರ ಸರಕಾರ ೩೫೬ನೆ ವಿಧಿ ಅನ್ವಯ ರಾಜ್ಯ ಬಿಜೆಪಿ ಸರಕಾರವನ್ನು ವಜಾಗೋಳಿಸಬೇಕು ಎಂದು ಆಗ್ರಹಿಸಿದ ದೇವೇಗೌಡ, ಸೋಮಶೇಖರ್ ಆಯೋಗದ ವರದಿಯಿಂದ ತನಗೇನು ಅಶ್ಚರ್ಯವಾಗಿಲ್ಲ ಎಂದು ಸರಕಾರದ ಕೋಮು ರಾಜಕೀಯವನ್ನು ಖಂಡಿಸಿದರು.

ರಾಜ್ಯದಲ್ಲಿನ ಚರ್ಚ್, ಮಸೀದಿಗಳ ಮೇಲೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕೇವಲ ಎಫ್‌ಐ‌ಆರ್ ದಾಖಲಿಸಿದ್ದು, ಯಾರ ವಿರುದ್ಧವೂ ಇದುವರೆಗೂ ಚಾರ್ಜ್‌ಶೀಟ್ ಹಾಕಿಲ್ಲ ಎಂದು ಕಿಡಿಕಾರಿದ ಅವರು, ಸರಕಾರಕ್ಕೆ ಕನಿಷ್ಟ ಆತ್ಮಗೌರವವಿದ್ದರೆ ಕೂಡಲೇ ಚರ್ಚ್ ದಾಳಿಗೆ ಕುಮ್ಮಕ್ಕು ನೀಡಿದ ಎಲ್ಲ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಮನವಿ ಮಾಡಿದರು.

ಯಾರ ರಕ್ಷಣೆಗಾಗಿ ತ್ರಿಶೂಲ ದೀಕ್ಷೆ, ಯಾರ ಉದ್ಧಾರಕ್ಕೆ ವಿರಾಟ್ ಹಿಂದೂ ಕೇಸರಿ ಸಮಾವೇಶಗಳು. ರಾಮನನ್ನು ಆರ‍್ಸೆಸೆಸ್ಸ್‌ಗೊಳಿಸಿದ ಬಿಜೆಪಿ ಮುಖಂಡರುಗಳು ಕೃಷ್ಣದೇವರಾಯನನ್ನು ಆರ‍್ಸೆಸೆಸ್ಸ್‌ಗೊಳಿಸಲು ಹೊರಟಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡ, ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆ, ಭಜರಂಗದಳ ಹಾಗೂ ಸಂಘಪರಿವಾರದ ಅಂಗಸಂಸ್ಥೆಗಳ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು

Share: