ಬೆಂಗಳೂರು, ಫೆಬ್ರವರಿ ೧೨:ಕಾನೂನು ಸುವ್ಯವಸ್ಥೆ ರಕ್ಷಣೆ ಬಿಜೆಪಿ ಸರ್ಕಾರ ಪರಮ ಆದ್ಯತೆ ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಕಾನೂನು ಸುವಸ್ಥೆಗೆ ಭಂಗ ತರುವವರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ಧಾಕ್ಷಣ್ಯವಾಗಿ ಕ್ರಮ ಜರುಗಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠರಿಗೆ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.
ಡಾಲರ್‍ಸ್ ಕಾಲೋನಿಯಲಿರುವ ತಮ್ಮ ನಿವಾಸದಲ್ಲಿ ಇಂದು ಕಾನೂನು ಸುವ್ಯವಸ್ಥೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡುವವರನ್ನು ಸಹಿಸಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದರು.
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ಗೆ ಮಸಿ ಬಳಿದ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದಿದ್ದೇನೆ. ತಪ್ಪಿತ್ಸಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನೆರೆ ಪೀಡಿತ ಜಿಲ್ಲೆಗಳಲ್ಲಿ ಮತ್ತೆ ಪ್ರವಾಸ ಆರಂಭಿಸುವುದಾಗಿ ಹೇಳಿದ ಅವರು ನೆರೆ ಪೀಡಿತ ಜಿಲ್ಲೆಗಳಲ್ಲಿ ಈಗಾಗಲೇ ಪರಿಹಾರ ಕಾರ್ಯಗಳು ಭರದಿಂದ ನಡೆದಿವೆ ಎಂದರು.
ನೆರೆ ಪೀಡಿತ ಗ್ರಾಮಗಳ ಸ್ಥಳಾಂತರ ಕಾರ್ಯಕ್ರಮ ನಡೆದಿದ್ದು, ಈಗಾಗಲೇ ಹಲವು ಕಡೆ ಮನೆ ನಿರ್ಮಾಣ ಕಾರ್ಯ ನಡೆದಿದೆ. ರಾಜ್ಯದ ಬಿಜೆಪಿ ಸರ್ಕಾರದ ೧೮ ತಿಂಗಳ ಸಾಧನೆಯ ವರದಿಯನ್ನು ಬರುವ ಅಧಿವೇಶನದಲ್ಲಿ ಮಂಡಿಸುವುದಾಗಿ ಅವರು ಹೇಳಿದರು.
ಬಿಜೆಪಿ ಸರ್ಕಾರದ ಸಾಧನಾ ವರದಿಯನ್ನು ಸದನದಲ್ಲಿ ಮಂಡಿಸುವ ಸಲುವಾಗಿ ಪ್ರತಿ ಇಲಾಖೆಯ ಪ್ರಗತಿಯ ವರದಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.
ರಾಜ್ಯದಲ್ಲಿ ಸರ್ಕಾರಿ ಭೂಮಿಯ ಒತ್ತುವರಿ ಬಗ್ಗೆ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯಪಡೆ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ ಭೂ ಕಬಳಿಕೆಯಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಲು ಸರ್ಕಾರ ಮುಂದಾಗಲಿದೆ ಎಂದರು.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಸಾಧ್ಯ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳ ವರದಿ ಬಂದ ನಂತರ ಈ ವಿಚಾರದಲ್ಲಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದರು.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಬಂಧ ಯಾವುದೇ ನಿರ್ಧಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.