ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಧಾರವಾಡ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ

ಧಾರವಾಡ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ

Thu, 11 Mar 2010 18:09:00  Office Staff   S.O. News Service

ಧಾರವಾಡ,ಮಾ.೧೧: ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯ ಗ್ರಾಮಾಮತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಹಾಗೂ ನೀರು ಪೂರೈಕೆಯ ತುರ್ತು ನಿರ್ವಹಣೆ ಕ್ರಮ ಕೈಕೊಳ್ಳಬೇಕೆಂದು ಜಿ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಭಗವತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

 

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಇಂದು ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮೇಲಿನಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿಯನ್ನು ಸಿದ್ಧ ಮಾಡಿ ಅದಕ್ಕೆ ಬೇಕಾಗುವ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ಸಹ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಇಂಜನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಶ್ರೀ ಎನ್.ಪಿ. ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಯ ಮುಂದುವರೆದ ಕಾಮಗಾರಿಗಳಿಗಾಗಿ ನಿಗಧಿ ಪಡಿಸಿದ ೧೪ ಕೋಟಿಗಳ ಪೈಕಿ ಈಗಾಗಲೇ ೪ ಕೋಟಿ ರೂ. ಬಿಡುಗಡೆ ಆಗಿದ್ದು, ಆ ಹಣವನ್ನು ಉಪಯೋಗಿಸಿ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಹುಬ್ಬಳ್ಳಿ ತಾಲೂಕಿನ ಉಮಚಗಿ, ಮಲ್ಲಿಗೆವಾಡ ಹಾಗೂ ಕೋಳಿವಾಡ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕೋಳಿವಾಡದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಸರಕಾರ ೨ ಕೋಟಿ ರೂ. ಅದರಂತೆ ನವಲಗುಂದ ತಾಲೂಕಿನ ತಡಹಾಳ ಕುಡಿಯುವ ನೀರು ಪೂರೈಕೆ ಕೆರೆ ಸುಧಾರಣೆಗೆ ೪೪ ಲಕ್ಷ ರೂ.ಗಳನ್ನು ಮಂಜೂರು ಮಾಡಿದೆಯೆಂದು ಸಭೆಗೆ ತಿಳಿಸಿದರು. ೨೦೧೦-೧೧ನೇ ಸಾಲಿಗಾಗಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆಯೆಂದು ಅವರು ಹೇಳಿದರು.

 

ಕಲಘಟಗಿ ತಾಲೂಕಿನ ದ್ಯಾಮನಕೊಪ್ಪ ಗ್ರಾಮದ ಕುಡಿಯುವ ನೀರು ಪೂರೈಕೆ ಯೋಜನೆಗೆ ಹಲವಾರು ದಿನಗಳಿಂದ ವಿದ್ಯುತ್ ಪೂರೈಕೆ ಮಾಡಿಲ್ಲ, ಹೆಸ್ಕಾಂ ಅಧಿಕಾರಿಗಳು ತುರ್ತಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಜಿ.ಪಂ. ಉಪಾಧ್ಯಕ್ಷ ಶ್ರೀ ಎಸ್.ಐ. ಚಿಕ್ಕಣ್ಣವರ ತಿಳಿಸಿದರು. ಅದೇ ರೀತಿ ಬೇಸಿಗೆ ಹಂಗಾಮಿನಲ್ಲಿ ಆದ್ಯತೆಯ ಮೇರೆಗೆ ನೀರು ಪೂರೈಕೆ ಯೋಜನೆಗಳಿಗೆ ವಿದ್ಯುತ್ ನೀಡಬೇಕೆಂದು ಸಹ ಹೇಳಿದರು.

 

 

ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ ಸರ್ಕಾರ ಒಟ್ಟು ೫೬.೩೫ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ೪೧ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಒಟ್ಟು ೧೧,೬೨೦ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ೬೩೨೦ ಕೆಲಸಗಳನ್ನು ಪೂರ್ಣಗೊಳಿಸಿದೆ. ಇನ್ನುಳಿದ ೫೩೦೦ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಮೂಲಕ ೨೪ ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆಯಲ್ಲದೆ ೫೦,೬೧೮ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಶ್ರೀ ಆರ್.ಜಿ. ನಾಯಕ್ ಸಭೆಗೆ ತಿಳಿಸಿದರು. ಈ ಯೋಜನೆಯಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ತೆಗೆದುಕೊಂಡ ಹೆಚ್ಚುವರಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

 

ಜಿಲ್ಲೆಯಲ್ಲಿ ೧೨೩ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ರಕ್ಷಣವೇ ನೇಮಕ ಮಾಡಲಾಗುತ್ತಿದೆ. ೫೦ ಪ್ರೌಢಶಾಲಾ ಶಿಕ್ಷಕರ ನೇಮಕ ಮಾರ್ಚ್ ಅಂತ್ಯದೊಳಗಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಭಾಸ್ಕರವಿಷ್ಣು ಭಟ್ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು ೧೩೮ ಶಾಲಾ ಕೊಠಡಿಗಳ ನಿರ್ಮಾಣ ಪೈಕಿ ೧೨೫ ಪೂರ್ಣಗೊಂಡಿವೆ. ಬರುವ ವರ್ಷದ ಕ್ರಿಯಾ ಯೋಜನೆಯಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಹಾಗೂ ಶೌಚಾಲಯಗಳು ಇಲ್ಲದ ಶಾಲೆಗಳನ್ನು ಅಳವಡಿಸಿಕೊಂಡು ಕ್ರಮಕೈಕೊಳ್ಳಲಾಗುವುದು ಎಂದರು.

 

ಸಂಪೂರ್ಣ ಸ್ವಚ್ಛತಾ ಅಭಿಯಾನದಡಿಯಲ್ಲಿ ಯೋಜನೆ ಪ್ರಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ ೬೨೦ ಶಾಲಾ ಶೌಚಾಲಯ ಹಾಗೂ ೪೬೫ ಅಂಗನವಾಡಿ, ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಬಡತನ ರೇಖೆಗಳಿಗಿಂತ ಕಡಿಮೆ ಇರುವ ಕುಟುಂಬಗಳಿಗೆ ೨೦,೬೭೯, ವೈಯಕ್ತಿಕ ಶೌಚಾಲಯ ಹಾಗೂ ಎ.ಪಿ.ಎಲ್. ಕುಟುಂಬಗಳಿಗೆ ೧೫೮೫೪ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಜಿಲ್ಲೆಯ ೫೦ ಗ್ರಾಮ ಪಂಚಾಯತಿಗಳನ್ನು ನಿರ್ಮಲ ಗ್ರಾಮ ಪುರಸ್ಕಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಯೋಜನಾ ನಿರ್ದೇಶಕ ಶ್ರೀ ಎಸ್.ವಿ. ದಿಂಡಿಲಕೊಪ್ಪ ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ನೀಡಿದರು.

 

 

ಡಾ: ನಂಜುಂಡಪ್ಪ ವರದಿಯಂತೆ ಪ್ರಾದೇಶಿಕ ಅಸಮತೋಲನ ನಿವಾgಣೆಗೆ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲೆಯ ಹಿಂದುಳಿದ ತಾಲೂಕುಗಳಾದ ನವಲಗುಂದ ಕಲಘಟಗಿ ಹಾಗೂ ಕುಂದಗೋಳದಲ್ಲಿ ಕೈಕೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿಗೆ ಈ ಯೋಜನೆಯಡಿ ಬಿಡುಗಡೆ ಮಾಡಿದ ಪೂರ್ಣ ಹಣವನ್ನು ಬಳಕೆ ಮಾಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಎಸ್.ಡಿ.ಪಿ. ಯೋಜನೆಯ ಅನುಷ್ಠಾನಕ್ಕಾಗಿ ಬೇಕಾಗುವ ಮೂಲಭೂತ ಸೌಕರ್ಯಗಳಿಗೆ ಕ್ರಿಯಾ ಯೋಜನೆಯನ್ನು ಸಹ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಭಗವತಿ ಹಾಗೂ ಉಪಾಧ್ಯಕ್ಷ ಶ್ರೀ ಎಸ್.ಐ.ಚಿಕ್ಕಣ್ಣವರ ಅವರು ವಿವಿಧ ಇಲಾಖೆಗಳು ಇದುವರೆಗೆ ಸಾಧಿಸಿದ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿ ಈ ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು ಮಾರ್ಚ್ ೩೧ ರೊಳಗಾಗಿ ವಿನಿಯೋಗಿಸಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಬೇಕು. ಅನುದಾನ ಪೂರ್ಣ ಬಳಕೆ ಮಾಡದೆ ಹೋದರೆ ಇಲಾಖೆಯ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

 

 

ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶ್ರೀ ಬಸವರಾಜ ಗುಡೆಣ್ಣವರ, ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಪಾಟೀಲ, ಜಿ.ಪಂ. ಕಾರ್ಯದರ್ಶಿ ಶ್ರೀ ಆರ್.ಜಿ. ನಾಯಕ್ ಮುಖ್ಯಲೆಕ್ಕಾಧಿಕಾರಿ ಶ್ರೀ ಎ.ಜಿ. ಹೊಸಮನಿ, ಮುಖ್ಯ ಯೋಜನಾಧಿಕಾರಿ ಶ್ರೀ ಕೊರವಾರ ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.   

 

 


Share: