ಕುಂದಾಪುರ, ಫೆಬ್ರವರಿ ೧೭: ನಗರದ ಗೀತಾಂಜಲಿ ಚಿತ್ರಮಂದಿರದ ಬಳಿ ಹಾದು ಹೋಗುತ್ತಿದ್ದ ಕ್ರೈಸ್ತ ಯುವಕನೋರ್ವನನ್ನು ಮೂವರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ವರದಿಯಾಗಿದೆ.
ತಲ್ಲೂರು ನಿವಾಸಿ ಜಾಕ್ಸನ್ ಡಿಸಿಲ್ವಾ (೨೩) ಎಂಬ ಕ್ರೈಸ್ತ ಯುವಕ ಈ ಹಲ್ಲೆಗೆ ಬಲಿಯಾಗಿದ್ದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಬಲಗಾಲಿಗೆ ತೀವ್ರವಾದ ಗಾಯವಾಗಿದೆ.
ಘಟನೆಯ ವಿವರ: ಜಾಕ್ಸನ್ ಕಲ್ಯಾಣಪುರವ ಬಿಬಿಎಮ್ ಕಾಲೇಜು ವಿದ್ಯಾರ್ಥಿಯಾಗಿದ್ದು ಎಂದಿನಂತೆ ಮಂಗಳವಾರ ಬೆಳಿಗ್ಗೆ ಬಸ್ಸಿನಲ್ಲಿ ಕುಂದಾಪುರಕ್ಕೆ ಬಂದಿದ್ದ. ಪುಸ್ತಕ ಅಂಗಡಿಯಲ್ಲಿ ಪುಸ್ತಕ ಖರೀದಿಸಿ ಸಂತೆಕಟ್ಟೆಯ ಬಸ್ ಹತ್ತಲಿಕ್ಕಾಗಿ ಹೊಸ ಬಸ್ ನಿಲ್ದಾಣದೆಡೆಗೆ ಸಾಗುತ್ತಿದ್ದಾಗ ಅಪರಿಚಿತ ಯುವಕರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.
ಚರ್ಚಿನಲ್ಲಿ ನೋಡಿದ್ದ: ಹಲ್ಲೆ ನಡೆಸಿದ ಯುವಕರಲ್ಲಿ ಓರ್ವನನ್ನು ಭಾನುವಾರ ದುಷ್ಕರ್ಮಿಗಳಿಂದ ದಾಳಿಗೀಡಾದ ಚರ್ಚ್ ಆವರಣದಲ್ಲಿ ನೋಡಿರುದಾಗಿ ಜಾಕ್ಸನ್ ಹೇಳಿದ್ದಾನೆ. ಹಲ್ಲೆ ನಡೆಸಿದವರು ಹಿಂದೂ ಸಂಘಟನೆಗೆ ಸೇರಿರಬಹುದೆಂದು ಶಂಕಿಸಲಾಗುತ್ತಿದೆ.
ಜಾಕ್ಸನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಕುಂದಾಪುರ, ಕೋಡಿ, ಕಟ್ಕೆರೆ ಚರ್ಚ್ ಧರ್ಮಗುರುಗಳು ಭೇಟಿ ನೀಡಿ ಸಾಂತ್ವಾನ ನೀಡಿದರು. ಕುಂದಾಪುರದ 'ಸಹಮತ' ಸಂಘಟನೆಯ ಮುಂದಾಳುಗಳಾದ ವಲೇರಿಯನ್ ಮೆನೇಜಸ್, ಶಶಿಧರ ಹೆಮ್ಮಾಡಿ, ವಿನೋದ್ ಕಾಸ್ತಾ, ಶ್ರೀಕಾಂತ ವಡೇರ ಹೋಬಳಿ, ಗಂಗೊಳ್ಳಿ ಚರ್ಚ್ ರೌಲಾನಾ ಮಂಡಳಿಯ ಮುಖಂಡ ಜೆರಾಲ್ಡ್ ಮತ್ತಿತರರು ಭೇಟಿ ನೀಡಿ ಸಾಂತ್ವಾನ ನೀಡಿದರು.
ಚರ್ಚ್ ದಾಳಿಯ ಬೆನ್ನಲ್ಲೇ ಕ್ರೈಸ ಯುವಕನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಹಲ್ಲೆ ಎಂಬ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು ಪೋಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಆದರೆ ಜನರು ಶಾಂತಿ ಕಾಯ್ದುಕೊಂಡಿದ್ದು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ.