ಭಟ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿ ಮುಖ್ಯಾಧ್ಯಾಪಕರ ಸಭೆ
ಭಟ್ಕಳ: ಶಿಕ್ಷಣ ಹಾಗೂ ಶಿಕ್ಷಕರನ್ನು ನಾನು ಅತಿಯಾಗಿ ಗೌರವಿಸುತ್ತೇನೆ. ಆ ಗೌರವ ನಿಮ್ಮಿಂದಲೂ ಬಯಸುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳನ್ನು ನಾನೂ ರಾಜಕಾರಣದಲ್ಲಿರುವವರೆಗೂ ಒಂದು ನಯ ಪೈಸೆ ಇಲ್ಲದೆ ಪೂರೈಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಅವರು ಗುರುವಾರ ಇಲ್ಲಿನ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಅಂಗನವಾಡಿ ಶಾಲಾ ಮುಖ್ಯಾಧ್ಯಾಪಕರ ಕುಂದುಕೊರತೆ ಸಭೆಯನ್ನುದ್ದೇಶಿಸಿ ಮಾತನಾಡಿರು.
ತಾಲೂಕಿನಲ್ಲಿ ಅಡುಗೆ ಅನಿಲ ನೇರವಾಗಿ ಶಾಲೆಗೆ ತಲುಪುವಂತಾಗಬೇಕು, ಎರಡನೆ ಹಂತದ ಶಾಲಾ ನಿರ್ವಾಹಣ ಅನುದಾನ ಬಿಡುಗಡೆಯಾಗದೆ ಇರುವುದು, ಶಾಲಾ ನಿರ್ವಾಹಣ ಅನುದಾನ ಹೆಚ್ಚಳ, ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವವರೆಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕು, ಭಟ್ಕಳ ತಾಲೂಕಿನಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಶಿಕ್ಷಕರನ್ನು ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸಬೇಕು, ತೆಂಗಿನಗುಂಡಿ ಉರ್ದು ಪ್ರಾಥಮಿಕ ಶಾಲೆಗೆ ಮಳೆಗಾಲದಲ್ಲಿ ತುಂಬಾ ತೊಂದರೆಯಾಗುತ್ತಿದ್ದು ಈ ಕಡೆಗೆ ಗಮನ ಹರಿಸಬೇಕು. ಮುಂಡಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರು ಹೆಚ್ಚುವರಿ ಪಟ್ಟಿಯಲ್ಲಿ ಬಂದಿದ್ದು ಅದನ್ನು ಸ್ಥಗಿತಗೊಳಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗಬೇಕು ಎಂಬ ಹತ್ತುಹಲವು ಸಮಸ್ಯೆಗಳು ಸಭೆಯಲ್ಲಿ ತೇಲಿಬಂದವು.

ಇದಕ್ಕೆ ಉತ್ತರಿಸಿ ಮಾತನಾಡಿದ ಸಚಿವರು, ಶಾಲೆಗಳಲ್ಲಿ ಯಾವುದೇ ಕೊರತೆಯಾಗಬಾರದು. ಒಂದು ಶಾಲೆಯಲ್ಲಿ ಕೊರತೆ ಉಂಟಾದರೆ ಇಡೀ ಊರಿಗೆ ಕೊರತೆಯಾದಂತೆ. ಶಾಲೆಯನ್ನು ಅಭಿವೃದ್ಧಿಪಡಿಸುವ ಸಂಪೂರ್ಣ ಹೊಣೆ ಶಿಕ್ಷಕರ ಮೇಲಿದೆ. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡು ಅವರು ಉನ್ನತ ಸ್ಥಾನಕ್ಕೇರುವಂತೆ ಮಾಡುವುದು ನಿಮ್ಮ ಗುರಿಯಾಗಿದೆ. ಈ ಗುರಿಯಲ್ಲಿ ಉಂಟಾಗುವ ಅಡೆತಡೆಗಳನ್ನು ನಿವಾರಿಸಿ ಉತ್ತಮ ನಿರ್ವಾಹಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇನೆ. ಇದರಲ್ಲಿ ನಿಮ್ಮ ಪಾಲು ದೊಡ್ಡದು ಎಂದರು. ನನಗೆ ಜನಸೇವೆ ಮಾಡಲು ನೀವು ಅವಕಾಶ ಮಾಡಿಕೊಟ್ಟದ್ದೀರಿ. ಈಗ ಕೆಲಸ ಮಾಡಲು ನಿಮ್ಮ ಸಹಾಯ ಸಹಕಾರವನ್ನು ಕೇಳುತ್ತಿದ್ದೇನೆ. ನಿಮ್ಮ ಶಾಲೆಯ ಸಮಸ್ಯೆಗಳೇನೆ ಇದ್ದರೂ ಆಧ್ಯತೆಯ ಪಟ್ಟಿ ಸಿದ್ದಮಾಡಿಕೊಳ್ಳಿ. ಆಧ್ಯತೆಯ ಮೇರೆಗೆ ಹಂತ ಹಂತವಾಗಿ ಅದನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ನಿಮ್ಮ ವರ್ಗಾವಣೆ, ಡೆಪುಟೇಶನ್, ಸೇವಾ ಹಿರಿತ ಯಾವುದೇ ಸಮಸ್ಯೆ ಇರಲಿ ಒಂದು ಪೈಸೆ ಖರ್ಚಾಗಂತೆ ನಾನು ಬಗೆಹರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ, ಪ್ರಭಾರಿ ಕ್ಚೇತ್ರ ಶಿಕ್ಚಣಾಧಿಕಾರಿ ಶಾರದಾ ನಾಯ್ಕ ಉಪಸ್ಥಿತರಿದ್ದರು.