ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿಕ್ಷಕರು ಸದೃಡ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಸೇವೆ ಸಲ್ಲಿಸಬೇಕು: ಬಸವರಾಜ ಹೊರಟ್ಟಿ

ಶಿಕ್ಷಕರು ಸದೃಡ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಸೇವೆ ಸಲ್ಲಿಸಬೇಕು: ಬಸವರಾಜ ಹೊರಟ್ಟಿ

Wed, 07 Sep 2022 04:41:43  Office Staff   SO News

ಧಾರವಾಡ : ಸದೃಡ, ಸುಸಂಸ್ಕೃತ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ಶಿಕ್ಷಕರು ಸಮರ್ಪಣಾ ಭಾವದಿಂದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಹಾಲಿ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು ಹೇಳಿದರು.

ಅವರು  ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ದಿನೋತ್ಸವ ಸಮಿತಿಯ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.

ಸಾಧಕ ಶಿಕ್ಷಕರನ್ನು ಒಂದೆಡೆ ಸೇರುವ ಸುಸಂದರ್ಭ ಸೃಷ್ಟಿ ಮಾಡಿದ ಕೀರ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ. ಭಾರತದ ಶೈಕ್ಷಣಿಕ ಚರಿತ್ರೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಮಾತೆ ಸಾವಿತ್ರಿಬಾಯಿ ಪುಲೆ ಮತ್ತು ಪಾತಿಮಾ ಅವರ ಹೆಸರು ಚಿರಾಯುವಾಗಿದೆ.

ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು. ಸದೃಢ, ಸುಸಂಸ್ಕøತ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವೃತ್ತಿಗೆ ಕಳಂಕ ಬರದಂತೆ ಶಿಕ್ಷಕ ಸಮುದಾಯ ಸೇವೆ ಸಲ್ಲಿಸಬೇಕು ಎಂದು ಬಸವರಾಜ ಹೊರಟ್ಟಿ ಅವರು ಹೇಳಿದರು.

ಸರ್ಕಾರಗಳು ಶಿಕ್ಷಕ ಸಮುದಾಯ ನೆಮ್ಮದಿ, ಸುಖ, ಸಂತೋಷದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಮೂಡಿಸಬೇಕು. ಅವರಿಗೆ ಸಿಗುವ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡಬೇಕೆಂದು  ಹೇಳಿದರು.

ರಾಜ್ಯದಲ್ಲಿ 90 ಸಾವಿರ ಡಿ,ಎಡ್, 32 ಸಾವಿರ ಬಿ.ಎಡ್,12 ಸಾವಿರ ಎಮ್.ಪಿಎಡ್,ಬಿಪಿಎಡ್ ಪದವಿಧರರು ನಿರುದ್ಯೋಗಿಗಳಾಗಿದ್ದಾರೆ. ಇಂತದರಲ್ಲಿ ತಾವು ಶಿಕ್ಷಕ ವೃತ್ತಿಗೆ ಸೇರಿ, ಸೇವೆ ಸಲ್ಲಿಸುತ್ತಿರುವುದು ಸುದೈವ. ಆದ್ದರಿಂದ ಎಲ್ಲ ಶಿಕ್ಷಕರು ಗುಣಮಟ್ಟದ ಮತ್ತು ನೈತಿಕ ಶಿಕ್ಷಣಕ್ಕೆ ಮತ್ತು ನೂತನ ಕೌಶಲ್ಯಗಳಿಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅವರು ಮಾತನಾಡಿ, ಶಿಕ್ಷಕರು ಸಮರ್ಪಣಾ ಭಾವದಿಂದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳನ್ನು ರಾಷ್ಟ್ರಕ್ಕೆ ಆದರ್ಶ ವ್ಯಕ್ತಿಯಾಗಿ, ಮಾದರಿ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಶಿಕ್ಷಕರಿಗೆ ಅಧ್ಯಯನ, ಬೋಧನಾ ಕೌಶಲ್ಯ, ತಾಂತ್ರಿಕ ನೈಪುಣ್ಯತೆ ಇರಬೇಕು. ರಾಜ್ಯ ಸರಕಾರವು ಶಿಕ್ಷಣ ಇಲಾಖೆಗೆ ಹೆಚ್ಚು ಆದ್ಯತೆ ನೀಡಿದೆ. ರೈತರ ಮಕ್ಕಳಿಗೆ ಶಿಷ್ಯವೇತನ, ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದರು.

ಕೇಂದ್ರ ಸರ್ಕಾರದ ರಂಗರಾಜನ್ ಶಿಕ್ಷಣ ಸುಧಾರಣಾ ವರದಿ ಪ್ರಕಾರ ರಾಜ್ಯದಲ್ಲಿ ಪ್ರಸಕ್ತ ಸಾಲಿನಿಂದ ಹಂತಹಂತವಾಗಿ ನೂತನ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ. ಶಿಕ್ಷಕರ ಹಾಗೂ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆಗಾಗಿ ನೂತನ ವೇತನ ಆಯೋಗ ರಚನೆ ಮತ್ತು ಎನ್.ಪಿ.ಎಸ್. ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂಬುದು ನ್ಯಾಯುತವಾಗಿದೆ. ಇದನ್ನು ಜನಪ್ರತಿನಿಧಿಗಳಾಗಿ ನಾವು ಸಹ ಬೆಂಬಲಿಸುತ್ತವೆ. ಈಗಾಗಲೇ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಕ್ರಮವಹಿಸುತ್ತಿದ್ದಾರೆ ಎಂದು ಎಸ್.ವ್ಹಿ.ಸಂಕನೂರ ಅವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲೆ ಎನ್.ಕೆ.ಸಾವುಕಾರ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ರವಿಕುಮಾರ ಬಾರಾಟಾಕೆ, ಜಿಲ್ಲಾ ಉಪ ಸಮನ್ವಯಾಧಿಕಾರಿ ಎಸ್.ಎಂ.ಹುಡೆದಮನಿ, ಗಿರೀಶ ಮಠಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಯು.ಎಫ್.ಚುಳಕಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಪ್ರೌಡಶಾಲಾ ಸಹಶಿಕ್ಷಕರ ಅಧ್ಯಕ್ಷ ಎಫ್.ವ್ಹಿ.ಮಂಜನ್ನವರ, ಕಾರ್ಯದರ್ಶಿ ಬಿ.ಜಿ.ಬಸೆಟ್ಟಿ, ತಾಲೂಕಾ ಅಧ್ಯಕ್ಷೆ ಶಾಂತಾ ಶೀಲವಂತರ ಸೇರಿದಂತೆ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು, ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಹಾಗೂ 2020-21 ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತ ಮಾರುತಿ ಹಣಮಂತಪ್ಪ ಭಜಂತ್ರಿ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಹಾಗೂ 2021-22ನೇ ಸಾಲಿನಲ್ಲಿ ನಿವೃತ್ತರಾದ ಉಪನ್ಯಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಹೇಮಂತ ಲಮಾಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರೇಖಾ ಎನ್.ಭಜಂತ್ರಿ ಹಾಗೂ ಪ್ರಕಾಶ ಭೂತಾಳಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ವಂದಿಸಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು: 
ಪ್ರಾಥಮಿಕ ಶಾಲಾ ವಿಭಾಗ: ಎಸ್.ಬಿ.ಕಾಳೆ (ಪ್ರಧಾನಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೀವಗಾಂಧಿನಗರ ಧಾರವಾಡ,) ನಂದಪ್ಪಗೌಡ.ಬಾ.ದ್ಯಾಪೂರ ಶಿಕ್ಷಕರು, (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾ ಕಾಲೊನಿ ಧಾರವಾಡ,) ರಾಜೀವ.ಆರ್.ಹಲವಾಯಿ ಶಿಕ್ಷಕರು, (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ಬಳ್ಳಿ), ಶ್ವೇತಾ ಕೋರಿ (ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರ್ಲಾನಿ ಮುಮ್ಮಿಗಟ್ಟಿ,) ಸುಭಾಶ.ಆರ್.ತಹಶೀಲ್ದಾರ (ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಳೆ ಆನಂದನಗರ ಹಳೇಹುಬ್ಬಳ್ಳಿ,) ಕೆ.ಎಸ್.ಖಾದ್ರಿ (ಶಿಕ್ಷಕಿಯರು ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಬಾಹರ ಬಾಡಾ ಹಳೇಹುಬ್ಬಳ್ಳಿ,) ಎಚ್.ಚಂದ್ರಪ್ಪ (ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪನಕೊಪ್ಪ,) ಫರೀದಾಬೇಗಂ.ಆ.ಬಿಸ್ತಿ (ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಸುಗಲ್), ಡಿ.ಎನ್.ದೊಡಮನಿ (ಪ್ರಾಧಾನಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾವರಗೇರೆ), ಎಫ್.ಎಸ್.ಹಿರೇಮಠ (ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂಡಸಗೇರಿ), ಆರ್.ಎಸ್ ಉಪ್ಪಾರ (ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಹರಕುಣಿ), ಕೆ.ಐ.ಶಿಂಗೋಟಿ (ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಟದೂರ), ಎಂ.ಎಲ್ ನಿಡವಣಿ (ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಬ್ರಾಹಿಂಪುರ), ಜಿ.ಎಸ್ ಹಳ್ಳಣ್ಣವರ (ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.ನಂ 2 ಹಾಲಕುಸುಗಲ್.) 

ಪ್ರೌಢಶಾಲಾ ವಿಭಾಗ: ಲಕ್ಷ್ಮೀಬಾಯಿ.ಎಂ.ಕುಲಕರ್ಣಿ (ಸಹ ಶಿಕ್ಷಕಿಯರು ಸರ್ಕಾರಿ ಉರ್ದು ಪ್ರೌಢಶಾಲೆ ಗುಲಗಂಜಿಕೊಪ್ಪ ಧಾರವಾಡ,) ಎಂ.ವೈ ಬಡಿಗೇರ (ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ನರೇಂದ್ರ), ರೇಣುಕಾ ಮುದ್ದಿಗೌಡರ (ಸಹ ಶಿಕ್ಷಕಿಯರು ಸರ್ಕಾರಿ ಪ್ರೌಢ ಶಾಲೆ ಆನಂದನಗರ ಹಳೇಹುಬ್ಬಳ್ಳಿ,) ಕ್ಯಾರೋಲಿನ್ ಬೆಸಿಲ್ ಫ್ರಾನ್ಸಿಸ್ (ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಅದರಗುಂಚಿ), ಆರ್.ಕೆ.ಕಾಮತ (ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಮುತ್ತಗಿ), ಎಲ್.ಎ.ನದಾಫ (ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಯರೇಬೂದಿಹಾಳ), ಸಿದ್ದಪ್ಪ.ಸಿ.ಮಾದರ (ದೈಹಿಕ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಶಿರೂರ.)


Share: