ಬೆಂಗಳೂರು: ರಾಜ್ಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ವಿಷ ಸೇವನೆಯಿಂದಾಗಿದೆ ಎಂದು ಕರ್ನಾಟಕ ಐಜಿಪಿ (ಪೊಲೀಸ್ ಮಹಾನಿರೀಕ್ಷಕ) (ಪಶ್ಚಿಮ ಶ್ರೇಣಿ) ದೇವಜ್ಯೋತಿ ರೇ ಬುಧವಾರ ಹೇಳಿದ್ದಾರೆ.
ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಸಂತೋಷ್ ಪಾಟೀಲ್ ಸಾವು ಪ್ರಕರಣ ಸಂಬಂಧ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 'ಸಂತೋಷ್ ಪಾಟೀಲ್ ಮೃತಪಟ್ಟ ಸ್ಥಳದ ವಿಚಾರಣೆಯನ್ನು ವಿವರವಾದ ಕಾರ್ಯವಿಧಾನಗಳೊಂದಿಗೆ ಮಾಡಲಾಗಿದೆ. ವಿಚಾರಣೆ ವೇಳೆ ವಿಧಿವಿಜ್ಞಾನ ತಜ್ಞರು, ವೈದ್ಯರು ಹಾಗೂ ಕುಟುಂಬಸ್ಥರು ಹಾಜರಿದ್ದರು. ಸಂತೋಷ ಪಾಟೀಲ ವಿಷ ಸೇವಿಸಿ ಸಾವಿಗೀಡಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಈಶ್ವರಪ್ಪ ಸೇರಿ ಮೂವರ ವಿರುದ್ಧ ಎಫ್ಐಆರ್
ಇನ್ನು ಮೃತರ ಸೋದರ ಸಂಬಂಧಿ ಪ್ರಶಾಂತ್ ಪಾಟೀಲ್ ನೀಡಿದ ದೂರಿನಂತೆ ಸಚಿವ ಈಶ್ವರಪ್ಪ, ಬಸವರಾಜ್ ಮತ್ತು ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಐಜಿಪಿ ತಿಳಿಸಿದರು. ಮೃತರ ಸಹೋದರ ಸಂತೋಷ್, ವೃತ್ತಿಯಲ್ಲಿ ವೃತ್ತ ನಿರೀಕ್ಷಕ ಗಿರೀಶ್ ಮತ್ತು ಸೋದರ ಸಂಬಂಧಿ ಸುರೇಶ್ ಪಾಟೀಲ್ ಶವವನ್ನು ಹೋಟೆಲ್ನಿಂದ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಆರಂಭದಲ್ಲಿ ಒತ್ತಾಯಿಸಿದ್ದರಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹೋಟೆಲ್ ಕೊಠಡಿಯಿಂದ ಸ್ಥಳಾಂತರಿಸುವುದು ವಿಳಂಬವಾಯಿತು. ಆರೋಪಿ ಸಂಖ್ಯೆ 1- ಈಶ್ವರಪ್ಪ ಮತ್ತು ಇತರರನ್ನು ಬಂಧಿಸುವವರೆಗೆ ಶವ ಹಸ್ತಾಂತರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದರು.
ಸಂಬಂಧಿಕರ ಮನವೊಲಿಕೆ
ಆದಾಗ್ಯೂ, ಎಸ್ಪಿ ವಿಷ್ಣುವರ್ಧನ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡವು ಮರಣೋತ್ತರ ಪರೀಕ್ಷೆಯ ಕಾರ್ಯವಿಧಾನವನ್ನು ಮತ್ತಷ್ಟು ವಿಳಂಬಗೊಳಿಸುವುದಿಲ್ಲ ಎಂದು ಮನವರಿಕೆ ಮಾಡಿದೆ. ಒಂದು ವೇಳೆ ಮರಣೋತ್ತರ ಪರೀಕ್ಷೆ ವಿಳಂಬವಾದರೆ ಪ್ರಮುಖ ಸಾಕ್ಷ್ಯಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಂಜೆ 5.10ರ ವೇಳೆಗೆ ಮೃತದೇಹವನ್ನು ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸುತ್ತಿದ್ದಂತೆ ಪೊಲೀಸರ ಸುದೀರ್ಘ ಮನವೊಲಿಸುವ ಕಾರ್ಯ ಫಲ ನೀಡಿದೆ.
ಪೊಲೀಸ್ ಮೂಲಗಳು TNIE ಗೆ ತಿಳಿಸಿರುವಂತೆ, ಸ್ಥಳ ಮಹಜರು ವೇಳೆ ಯಾವುದೇ ಡೆತ್ ನೋಟ್ ಕಂಡುಬಂದಿಲ್ಲ, ಆದರೆ ಕೋಣೆಯಲ್ಲಿ ಕೀಟನಾಶಕ (ವಿಷಕಾರಿ ವಸ್ತು) ಬಾಟಲಿ ಕಂಡುಬಂದಿದೆ. ಮಂಗಳೂರಿನ ಪ್ರಾದೇಶಿಕ ಎಫ್ಎಸ್ಎಲ್ನ ತಜ್ಞರು ಹೆಚ್ಚಿನ ವಿಶ್ಲೇಷಣೆಗಾಗಿ ಮಾದರಿಗಳನ್ನು ತೆಗೆದುಕೊಂಡಿದ್ದಾರೆ.
ಏತನ್ಮಧ್ಯೆ, ಎಫ್ಐಆರ್ನಲ್ಲಿ ಸಚಿವ ಈಶ್ವರಪ್ಪ ಮತ್ತು ಇತರ ಆರೋಪಿಗಳ ಹೆಸರಿರುವ ಕಾರಣ, ತನಿಖೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.