ಕಾರವಾರ : ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮತದಾರರ ಪಟ್ಟಿ ಪರಿಷ್ಕರಣೆ, ಮತದಾನ ಕ್ಷೇತ್ರಗಳಲ್ಲಿ ಸಕಲ ಮೂಲಭೂತ ಸೌಲಭ್ಯ ಪೂರೈಸಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ ಮತ್ತು ಅದು ನಿರಂತರವಾಗಿರುತ್ತದೆ. ಜಿಲ್ಲೆಯಲ್ಲಿ ಮಾ.3 ರ ವರೆಗಿನ ಸಮೀಕ್ಷೆ ಪ್ರಕಾರ 594244 ಪುರುಷ ಹಾಗೂ 589211 ಮಹಿಳಾ ಹಾಗೂ 6 ಜನ ತೃತೀಯ ಲಿಂಗ ಮತದಾರರು ಇದ್ದು ಒಟ್ಟು1183461 ಮತದಾರರನ್ನು ಹೊಂದಿದೆ ಎಂದರು.
ಜಿಲ್ಲೆಯಲ್ಲಿ 1435 ಮತದಾನ ಕೇಂದ್ರಗಳಿಗೆ ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ಪೂರೈಸಲಾಗಿದೆ ಎಂದರು. ಜುನಾವಣೆ ಆಯೋಗವು ಈ ವರ್ಷ ಯುವ ಮತದಾರರಿಗೆ ಹೆಚ್ಚು ಒತ್ತು ನೀಡಿದ್ದು ಜಿಲ್ಲೆಯಲ್ಲಿ ಈ ವರ್ಷ 24234 ಯುವ ಮತದಾರರು ಮತ ಚಲಾಯಿಸಲಿದ್ದಾರೆ. ಹಾಗೆಯೇ 80 ವರ್ಷ ಮೇಲ್ಪಟ್ಟ 27399 ಮತದಾರರನ್ನು ಗುರುತಿಸಲಾಗಿದೆ. ಚುನಾವಣೆ ಆಯೋಗವು ಮಾಡೆಲ್ ಪೊಲಿಂಗ್ ಸ್ಟೇಷನ್ ಮಾಡಲು ಮಾರ್ಗದರ್ಶನ ನೀಡಿದ್ದು ಅದರಂತೆ ಜಿಲ್ಲೆಯಲ್ಲಿ ಪ್ರತಿ ಮತ ಕ್ಷೇತ್ರಕ್ಕೆ 5 ರಂತೆ ಒಟ್ಟು 35 ಮಹಿಳಾ ಮತದಾನ ಕೇಂದ್ರವನ್ನು ಮಾಡಲಾಗಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಹಿಡಿದು ಮತದಾನ ಮಾಡುವರು ಕೂಡ ಮಹಿಳೆಯರು ಆಗಿರುತ್ತಾರೆ. ಹಾಗೆಯೇ 12 PWD ಮತದಾನ ಕೇಂದ್ರ, 12 ಯುವ ಮತದಾನ ಕೇಂದ್ರ ಹೀಗೆ ಒಟ್ಟು 66 ವಿಶೇಷ ಮತದಾನ ಕೇಂದ್ರಗಳನ್ನು ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 1883 ನಿಯಂತ್ರಣ ಘಟಕಗಳು 2685 ಬೆಲೆಟ್ ಘಟಕಗಳು ಹಾಗೂ 2039 ವಿವಿಪ್ಯಾಟ್ ಗಳ ಲಭ್ಯತೆ ಇರುವುದರ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 199 ಕ್ರಿಟಿಕಲ್ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಮತದಾನದ ಸಂದರ್ಭದಲ್ಲಿ ಗಲಭೆ ಅಥವಾ ಇನ್ಯಾವುದೇ ಚಟುವಟಿಕೆಗಳು ನಡೆದಿರುವುದನ್ನು ಗಮನಿಸಿ ಅಂತಹ ಮತ ಕೇಂದ್ರಗಳ ಮೇಲೆ ನಿಗಾ ವಾಹಸಲು ಕ್ರಿಟಿಕಲ್ ಮತದಾನ ಕೇಂದ್ರಗಳನ್ನು ಮಾಡಲಾಗಿದೆ ಎಂದರು. ಹಾಗೆಯೇ ದುರ್ಬಲ ವ್ಯಕ್ತಿಗಳಿಂದ ಮತದಾನ ಸಂದರ್ಭದಲ್ಲಿ ಮತದಾರರಿಗೆ ಹೆದರಿಕೆ ಇತರ ಕಾರಣಗಳಿಂದ ತೊಂದರೆ ಒಳಗಾಗುವಂತ 55 ಮತ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಇಂತಹ ಮತಕ್ಷೇತ್ರದ ಮೇಲೆ ಪ್ರಭಾವ ಬಿರುವ 132 ಜನರನ್ನು ಗುರುತಿಸಿ ಅವರು ಮೇಲೆ ನಿಗಾ ಇರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 25 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಅದರಲ್ಲಿ 3 ಅಂತರಾಜ್ಯ, 14 ಅಂತರ್ಜಿಲ್ಲಾ ಹಾಗೂ 8 ಜಿಲ್ಲಾ ಕೇಂದ್ರದಲ್ಲಿ ಚೆಕ್ ಪೋಸ್ಟ್ ಗಳನ್ನು ಮಾಡಿ ತೀವ್ರ ನಿಗಾ ವಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ವಿವಿಧ ತಾಲೂಕ ಆಫೀಸಗಳಿಂದ 1122 ಸ್ಥಳಗಳಲ್ಲಿ ಅಣಕು EVM ಮತದಾನ ಪ್ರದರ್ಶನ ಮಾಡಲಾಯಿತು. ಇದರಲ್ಲಿ ಒಟ್ಟು 76124 ಜನ ಭಾಗವಹಿಸಿ ಅಣಕು ಮತದಾನ ಮಾಡಿದರು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವಿರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಕಾಂದೂ, ಎಸ್ಪಿ ವಿಷ್ಣುವರ್ಧನ್ ಏನ್, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಜಯಂತ್ ಎಚ್ ವಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.