ಬೆಂಗಳೂರು: ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ಮಧ್ಯಪ್ರವೇಶದ ಬಳಿಕ ತನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಬಂದಿರುವ ಕುರಿತು ಮತ್ತು ಎಸಿಬಿ ಮುಖ್ಯಸ್ಥರ ಕಾರ್ಯವೈಖರಿ ವಿರುದ್ಧ ಹೇಳಿಕೆ ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಸೋಮವಾರ ತಮ್ಮ ಹೇಳಿಕೆಯನ್ನು ಆದೇಶದಲ್ಲಿ ಪುನರುಚ್ಚರಿಸಿದ್ದಾರೆ.
ಅಧಿಕಾರಿಯ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ತಮಗೆ ಬಂದ ಬೆದರಿಕೆಯ ಬಗ್ಗೆಯೂ ಪ್ರಸ್ತಾಪಿಸಿದರು. ಸಿಜೆ ಆಗಿದ್ದ ರಿತುರಾಜ್ ಆವಸ್ಥೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಮೂರ್ತಿಯೊಬ್ಬರು ಹೇಳಿದ ವಿಷಯ ಪ್ರಸ್ತಾಪಿಸಿದರು. ಜುಲೈ 4ರಂದು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ತನಗೆ ಬಂದಿದ್ದ ಬೆದರಿಕೆಯನ್ನು ನ್ಯಾಯಮೂರ್ತಿ ಸಂದೇಶ್, ಸೋಮವಾರ ನೀಡಿದ ಲಿಖಿತ ಆದೇಶದಲ್ಲಿ ದಾಖಲಿಸಿದ್ದಾರೆ.
ಜುಲೈ 4ರಂದು ಕರ್ನಾಟಕದ ಮಾಜಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿಯವರಿಗೆ ಬೀಳ್ಕೊಡುಗೆ ಔತಣಕೂಟದಲ್ಲಿ ತನ್ನ ಬಳಿ ಬಂದ ಸಹ ನ್ಯಾಯಾಧೀಶರೊಬ್ಬರು ವರ್ಗಾವಣೆಯ ಸುಳಿವಿನ ಬಗ್ಗೆ ಎಚ್ಚರಿಸಿದ್ದರು ಎಂದು ಜುಲೈ 4 ರಂದು ನಡೆದ ವಿಚಾರಣೆ ವೇಳೆ ನ್ಯಾ. ಸಂದೇಶ್ ಹೇಳಿದ್ದರು. ಜು.1ರಂದು ರಾತ್ರಿ ಭೋಜನದ ಸಮಯದಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರು ಬಂದು ನನ್ನ ಪಕ್ಕದಲ್ಲಿ ಕುಳಿತರು. ಹೊಸದಿಲ್ಲಿಯಿಂದ ನನಗೆ ಒಂದು ಕರೆ ಬಂದಿದೆ, ಆ ವೇಳೆ ನಿಮ್ಮ ಬಗ್ಗೆ ವಿಚಾರಿಸಿದ್ದರು ಎಂದು ಹೇಳಿದರು. ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ ಎಂದು ಹೇಳಿದ್ದಾಗಿ ಸಂದೇಶ್ ಬಹಿರಂಗಪಡಿಸಿದ್ದರು. ಅಲ್ಲದೆ, ಆ ಎಡಿಜಿಪಿ ಉತ್ತರ ಭಾರತದಿಂದ ಬಂದವರು ಬಹಳ ಪ್ರಭಾವಿ ಎಂದು ತಿಳಿಸಿದ ಅವರು, ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ವಿಚಾರವನ್ನೂ ಹೇಳಿದರು ಎಂದು ನ್ಯಾಯಮೂರ್ತಿ ನ್ಯಾ. ಎಚ್.ಪಿ.ಸಂದೇಶ್ ಉಲ್ಲೇಖಿಸಿದರು.