ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಷ್ಟ್ರಪತಿಯಿಂದ ಸಂಸತ್ ಉದ್ಘಾಟನೆಗೆ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ರಾಷ್ಟ್ರಪತಿಯಿಂದ ಸಂಸತ್ ಉದ್ಘಾಟನೆಗೆ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Sat, 27 May 2023 12:52:55  Office Staff   Vb

ಹೊಸದಿಲ್ಲಿ: ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿಯವರು ಉದ್ಘಾಟಿಸಬೇಕು, ಪ್ರಧಾನಿಯಲ್ಲ ಎಂಬುದಾಗಿ ಲೋಕಸಭಾ ಕಾರ್ಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನೂತನ ಸಂಸತ್‌ ಕಟ್ಟಡವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

“ಸಂಸತ್ ಕಟ್ಟಡವನ್ನು ಯಾರು ಉದ್ಘಾಟಿಸಬೇಕೆಂದು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ'' ಎಂದು ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿದೆ. ಸಂಸತ್ತನ್ನು ಉದ್ಘಾಟಿಸುವ ಅಧಿಕಾರವನ್ನು ಯಾವುದೇ ಕಾನೂನು ಕಾರ್ಯಾಂಗದ ಮುಖ್ಯಸ್ಥರಿಗೆ ನೀಡುವುದಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ ವಕೀಲ ಸಿ.ಆರ್. ಜಯ ಸುಕಿನ್ ನ್ಯಾಯಾಲಯದಲ್ಲಿ ವಾದಿಸಿದರು.

ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದು ರಾಷ್ಟ್ರಪತಿ ಎಂದು ಅವರು ಹೇಳಿದರು. ಆಗ, ಇದಕ್ಕೂ ಸಂಸತ್ ಕಟ್ಟಡ ಉದ್ಘಾಟನೆಗೂ ಏನು ಸಂಬಂಧ ಎಂದು ಪೀಠ ಅರ್ಜಿದಾರರನ್ನು ಪ್ರಶ್ನಿಸಿತು.

“ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದಕ್ಕೂ, ಸಂಸತ್ ಕಟ್ಟಡವನ್ನು ಉದ್ಘಾಟಿಸುವುದಕ್ಕೂ ಏನು ಸಂಬಂಧ ಎನ್ನುವುದನ್ನು ನೀವು ದಯವಿಟ್ಟು ನಮಗೆ ತೋರಿಸಿ” ಎಂದು ನ್ಯಾ. ಮಹೇಶ್ವರಿ ಅರ್ಜಿದಾರರನ್ನು ಉದ್ದೇಶಿಸಿ ಹೇಳಿದರು. “ಯಾವ ಸಂಬಂಧವೂ ಇಲ್ಲ. ಇದರ ಬಗ್ಗೆ ನಿರ್ಧರಿಸುವುದು ನ್ಯಾಯಾಲಯದ ಕೆಲಸವೂ ಅಲ್ಲ” ಎಂದರು. ಸಂಸತ್‌ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸುವುದು ಸಂವಿಧಾನದ 79ನೇ ವಿಧಿಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದರು. “ನಾವು 79ನೇ ವಿಧಿಯನ್ನು ನೋಡಿದ್ದೇವೆ. ನಾವೊಂದು ನಿಮಗೆ ಪ್ರಶ್ನೆ ಕೇಳುತ್ತೇವೆ: ಈ ವಿಧಿಗೂ ಈ ವಿಷಯಕ್ಕೂ ಏನು ಸಂಬಂಧ?” ಎಂದು ನ್ಯಾಯಪೀಠ ಹೇಳಿತು.

ಅಂತಿಮವಾಗಿ, ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲು ಅರ್ಜಿದಾರರು ನ್ಯಾಯಾಲಯದ ಅನುಮತಿ ಕೋರಿದರು. ಆದರೆ, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.


Share: