ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಳ್ಳಾರಿ: ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಗಣಿಧಣಿಗಳು

ಬಳ್ಳಾರಿ: ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಗಣಿಧಣಿಗಳು

Mon, 26 Oct 2009 02:27:00  Office Staff   S.O. News Service
ಬೆಂಗಳೂರು/ಬಳ್ಳಾರಿ, ಅ.೨೪ :ಬಳ್ಳಾರಿ ಗಣಿ ಧಣಿಗಳೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಇತ್ತ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಮಜಾಯಿಷಿ ನೀಡಿದ ಬೆನ್ನಲ್ಲೇ ಅತ್ತ ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ಸಚಿವ ಜನಾರ್ದನರೆಡ್ಡಿ ಬಹಿರಂಗವಾಗಿಯೇ ಸರ್ಕಾರದ ನಿಲವುಗಳನ್ನು ವಿರೋಧಿಸಿದ್ದಾರೆ. ಬೆಂಬಲಿಗ ಶಾಸಕ, ಸಚಿವರನ್ನು ಒಗ್ಗೂಡಿಸಿ ನಾಯಕತ್ವದ ವಿರುದ್ಧ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. 
 
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮಗ್ಗುಲು ಮುಳ್ಳಿನಂತಾಗಿರುವ ಬಳ್ಳಾರಿ ಗಣಿ ಧಣಿಗಳೊಂದಿಗೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಮೂಲಕ ಉದ್ಭವಿಸಿರುವ ಅಪಸ್ವರ ಹೋಗಲಾಡಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. 

ಶುಕ್ರವಾರ ಬೆಳಗ್ಗೆ ನಡೆದ ಮಾತುಕತೆ ಸಂದರ್ಭ ಮುಖ್ಯಮಂತ್ರಿಗಳು ಆಯಾಸಗೊಂಡಿದ್ದರಿಂದ ಹೆಚ್ಚು ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಹೆಚ್ಚು ಬೆಳೆಸಲು ಬಿಡದೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಗಣಿ ಧಣಿಗಳ ಅಸಮಾಧಾನವನ್ನು ಶಮನಗೊಳಿಸಲು ಪ್ರಯತ್ನಿಸಲಾಗುವುದು ಎನ್ನಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿಗಳ ಕಾರ್ಯವೈಖರಿಯಿಂದ ಮುನಿಸಿಕೊಂಡು ಹಠಾತ್ತನೇ ಬಳ್ಳಾರಿಗೆ ತೆರಳಿರುವ ಗಣಿ ಧಣಿಗಳೂ ಆಗಿರುವ ತ್ರಿಮೂರ್ತಿ ಸಚಿವರು ತಮ್ಮ ಬೆಂಬಲಿಗರೊಂದಿಗೆ ಮುಂದಿನ ರಣನೀತಿ ರೂಪಿಸುತ್ತಿದ್ದಾರೆ. 
ಶನಿವಾರ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಕ್ಕೆ ಆಗಮಿಸಿದ ಸಂದರ್ಭ ಮುಖ್ಯಮಂತ್ರಿಗಳ ವಿರುದ್ಧದ ಬಂಡಾಯ ಕುರಿತು ಸುದ್ದಿಗಾರರ ಪ್ರಶ್ನೆಗೆ, ‘ಕಾಲವೇ ಇದಕ್ಕೆ ತಕ್ಕ ಉತ್ತರ ನೀಡಲಿದೆ...’ ಎಂಬ ಒಗಟಿನ ರೂಪದ ಉತ್ತರ ನೀಡುವ ಜನಾರ್ದನ ರೆಡ್ಡಿ ಅವರು ಬಿಜೆಪಿಯಲ್ಲೀಗ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂಕೇತ ಹೊರಹಾಕಿದರು. 

ರೆಡ್ಡಿ ಸಹೋದರರು ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ಪ್ರಕಾರ ಅವರ ಅಸಮಾಧಾನಕ್ಕೆ ಮುಖ್ಯವಾದ ಎರಡು ಕಾರಣಗಳಿವು: 


೧      ‘ನಮ್ಮನ್ನು ರಾಜಕೀಯವಾಗಿ ತುಳಿಯಲು ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದು, ಇದಕ್ಕೆ ಪೂರಕವಾಗಿ ನಮಗೆ ಸಂಬಂಧಿಸಿದ ಇಲಾಖೆಗಳ ಆಯಕಟ್ಟಿನ ಸ್ಥಳಗಳಲ್ಲಿ ತಮಗೆ ಬೇಕಾದವರನ್ನೇ ಗಮನಕ್ಕೆ ತರದೆ ಬಲವಂತವಾಗಿ ತಂದು ಕೂಡಿಸುತ್ತಿದ್ದಾರೆ’. 
೨      ‘ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರ ಹಸ್ತಕ್ಷೇಪ ಮಿತಿಮೀರಿದೆ. ತಮ್ಮದಲ್ಲದ ಇಲಾಖೆಗಳಲ್ಲಿ ಮುಖ್ಯಮಂತ್ರಿಗಳ ಪ್ರಭಾವ ಬಳಸಿ ತಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಇತರರ ಮೇಲೆ ಸವಾರಿ ಮಾಡುತ್ತಿದ್ದಾರೆ’. 

ಇದೆಲ್ಲದರ ಜತೆಗೆ ಮುಖ್ಯಮಂತ್ರಿಗಳು ಇತ್ತೀಚಿನ ದಿನಗಳಲ್ಲಿ ತಮ್ಮದೇ ಸಮುದಾಯಕ್ಕೆ ಸೇರಿದ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸಿ.ಎಂ.ಉದಾಸಿ ಮೊದಲಾದವರ ‘ಕಿವಿಯೂದುವ ಮಾತು’ಗಳನ್ನೇ ಕೇಳಿಕೊಂಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇತರರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಬೇಸರವನ್ನೂ ರೆಡ್ಡಿ ಸಹೋದರರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 
ಶಾಸಕರ ಒಗ್ಗೂಡಿಸಲು ಗಣಿ ಧಣಿಗಳ ಯತ್ನ: ತಮ್ಮಂತೆಯೇ ಮುಖ್ಯಮಂತ್ರಿಗಳ ವಿರುದ್ಧ ಅತೃಪ್ತಿ ಹೊಂದಿರುವ ಸಮಾನಮನಸ್ಕ ಸಚಿವರು ಹಾಗೂ ಶಾಸಕರನ್ನು ಒಗ್ಗೂಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ತಂತ್ರವನ್ನೂ ಹೆಣೆಯುತ್ತಿದ್ದಾರೆ. 
ಈ ತಂತ್ರ ಯಾವ ಮಟ್ಟಕ್ಕೆ ಹೋಗಿ ನಿಲ್ಲಲಿದೆ ಎಂಬುದನ್ನು ಸದ್ಯದ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟವಾಗಬಹುದು. ಆದರೆ, ಅಷ್ಟರೊಳಗಾಗಿ ಈ ಅಸಮಾಧಾನ ತಣ್ಣಗಾದರೆ ಸರಿ. ಇಲ್ಲದಿದ್ದರೆ ಕ್ಷಿಪ್ರ ರಾಜಕೀಯ ಕ್ರಾಂತಿ ನಡೆಸುವ ಮೂಲಕ ನಾಯಕತ್ವ ಬದಲಾವಣೆಗೂ ಯಾಕೆ ಪ್ರಯತ್ನ ಮಾಡಬಾರದು ಎಂಬ ಧಾಟಿಯಲ್ಲಿ ರೆಡ್ಡಿ ಸಹೋದರರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

‘ಪ್ರವಾಹ ಸಂಕಷ್ಟದಲ್ಲೂ ತಮ್ಮ ಕಡೆಗಣನೆ’: ಪ್ರವಾಹ ಸಂಕಷ್ಟ ಪರಿಸ್ಥಿತಿಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಕಡೆಗೆಣಿಸಿ, ಸಚಿವೆ ಶೋಭಾ ಕರಂದ್ಲಾಜೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಜವಾಬ್ದಾರಿ ನೀಡಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವ ತಮ್ಮನ್ನು ತುಳಿಯಲು ಪ್ರಯತ್ನಿಸಿದರು ಎಂಬುದು ಈಗ ರೆಡ್ಡಿ ಸಹೋದರರಲ್ಲಿ ಹುಟ್ಟಿಕೊಂಡಿರುವ ಗುಮಾನಿ. 
‘ಪ್ರವಾಹ ವೇಳೆ ರಾಯಚೂರಿನಲ್ಲಿ ಶೋಭಾ ಕರಂದ್ಲಾಜೆ ಐದು ದಿನಗಳ ವಾಸ್ತವ್ಯ ಹೂಡಿದ್ದು ತಮ್ಮ ಗುಂಪು (ರೆಡ್ಡಿ ಬಣ) ಬೆಳೆಯದಿರಲಿ ಎಂಬ ಕಾರಣಕ್ಕಾಗಿ’ ಎಂದು ಗಣಿಧಣಿಗಳು ತಮ್ಮ ಆಪ್ತರೆದುರು ಬೇಸರ ತೋರ್ಪಡಿಸಿದ್ದಾರೆ.
ಗಣಿ ಉದ್ಯಮಿಗಳಲ್ಲಿ ಒಡಕಿಗೆ ಯತ್ನ: ‘ಅದಿರು ಸಾಗಾಣಿಗೆ ಸುಂಕ ವಿಧಿಸುವ ಮೂಲಕ ಜಿಲ್ಲೆಯ ಗಣಿ ಉದ್ಯಮಿಗಳ ಜೊತೆ ರೆಡ್ಡಿಗಳ ಸಂಬಂಧ ಹಳಸಲಿ, ನೆರೆ ಸಂತ್ರಸ್ತರಿಗೆ ನೂರಾರು ಕೋಟಿ ರುಪಾಯಿ ನೆರವು ನೀಡುವುದಾಗಿ ಹೇಳಿದ ಜಿಲ್ಲೆಯ ಗಣಿ ಉದ್ಯಮಿಗಳು ಅಸಮಾಧಾನಗೊಳ್ಳಲಿ ಎಂಬ ದುರುದ್ದೇಶ ಅಡಗಿದೆ’ ಎಂದೂ ರೆಡ್ಡಿ ಸಹೋದರರು ಕಿಡಿಕಾರಿದ್ದಾರೆ. 
ಪಾದಯಾತ್ರೆಯಲ್ಲಿ ನೂರಾರು ಕೋಟಿ ರು. ಹಣ ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರಾದರೂ, ವಾಸ್ತವದಲ್ಲಿ ೪೦ ಕೋಟಿ ರು.ಗಳಷ್ಟೂ ಸಂಗ್ರಹವಾಗಿಲ್ಲ. ಅಷ್ಟೊಂದು ಹಣ ಸಂಗ್ರಹವಾಗಿದ್ದರೆ, ಭರವಸೆ ನೀಡಿದವರ ಹೆಸರು ಅಥವಾ ಚೆಕ್‌ಗಳ ಸಮೇತ ಮಾಧ್ಯಮಗಳಲ್ಲಿ ಹೆಸರು ಪ್ರಕಟಿಸಲಿ ಅಥವಾ ಶ್ವೇತಪತ್ರ ಹೊರಡಿಸಲಿ ಎಂದೂ ರೆಡ್ಡಿ ಸಹೋದರರು ಬಿಜೆಪಿ ಆಂತರಿಕ ವಲಯದಲ್ಲಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ. 

ಕಾಲವೇ ಉತ್ತರ ನೀಡಲಿದೆ! 
ಕನ್ನಡಪ್ರಭ ವಾರ್ತೆ, ಸಿರುಗುಪ್ಪ (ಬಳ್ಳಾರಿ), ಅ.೨೪ 
ಮುಖ್ಯಮಂತ್ರಿ ವಿರುದ್ಧ ಬಳ್ಳಾರಿ ಗಣಿ ಧಣಿಗಳ ಮತ್ತೊಂದು ಬಂಡಾಯದ ಅಧ್ಯಾಯಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ‘ಕಾಲವೇ ಇದಕ್ಕೆ ತಕ್ಕ ಉತ್ತರ ನೀಡಲಿದೆ’ ಎಂದಿದ್ದರೆ, ಪಕ್ಷದಲ್ಲಿ ಸಣ್ಣಪುಟ್ಟ ಬಿರುಕುಗಳು ಸಹಜವಾಗಿದ್ದು, ನನಗೂ ಈ ಹಿಂದೆ ಅಸಮಾಧಾನವಾಗಿತ್ತು ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. 
ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ, ಸಿರುಗುಪ್ಪ ನ್ಯಾಯಾಲಯಕ್ಕೆ ಶನಿವಾರ ಹಾಜರಾಗಲು ಆಗಮಿಸಿದ್ದ ಸಚಿವ ಜನಾರ್ದನ ರೆಡ್ಡಿ ಹಾಗೂ ನೆರೆ ಪರಿಹಾರ ಪರಿಶೀಲಿಸಲು ಬಂದಿದ್ದ ಸಚಿವ ಈಶ್ವರಪ್ಪ, ಸಿರುಗುಪ್ಪ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. 

ಕಾಲವೇ ಉತ್ತರಿಸಲಿದೆ: ಸಿ‌ಎಂ ವಿರುದ್ಧ ಬಂಡಾಯಕ್ಕೆ ಕಾರಣವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವುದರಿಂದ ಜಾರಿಕೊಳ್ಳಲು ಯತ್ನಿಸಿದ ರೆಡ್ಡಿ, ಆಮೇಲೆ ಸಮಜಾಯಿಷಿ ನೀಡಬೇಕಾಯಿತು. ಅದಿರು ಲಾರಿಗೆ ಸುಂಕ ವಿಧಿಸಿದ್ದು, ಗದಗ ಜಿಲ್ಲಾಧಿಕಾರಿ ಎತ್ತಂಗಡಿ, ಎಸ್ಪಿ ವಿರುದ್ಧ ಸಿ‌ಎಂ ಕೋಪ, ಕಂದಾಯ ಸಚಿವ ಕರುಣಾಕರ ರೆಡ್ಡಿ ಮಾಹಿತಿಗೂ ತಾರದೆ ನೆರೆ ಪರಿಹಾರ ಬಗೆಗಿನ ಪ್ರಶ್ನೆಗಳಿಗೆ ಸಚಿವ ಜನಾರ್ದನ ರೆಡ್ಡಿ ಸ್ಪಷ್ಟ ಉತ್ತರ ನೀಡದಿದ್ದರೂ, ಇದಕ್ಕೆ ಕಾಲವೇ ಉತ್ತರಿಸಲಿದೆ ಎಂದಿದ್ದು ಬಂಡಾಯದ ಸೂಚನೆಯಂತಿತ್ತು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಒಳಿತನ್ನು ಬಯಸಿ, ನೆರವು ನೀಡಲು ಜಿಲ್ಲೆಯ ಗಣಿ ಮಾಲೀಕರು ೩೦೦- ೪೦೦ ಕೋಟಿ ರು.ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಮುಂದೆ ಬಂದಿದ್ದಾರೆ. ಆದರೆ, ಅದಿರು ಸಾಗಾಣಿಕೆ ಲಾರಿಗೆ ೧ ಸಾವಿರ ರು. ಸುಂಕ ವಿಧಿಸಿದ್ದು ಸರಿಯಲ್ಲ ಎಂದು ಗಣಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ, ಸಚಿವ ಸಂಪುಟದ ಮುಂದೆ ಈ ಪ್ರಸ್ತಾಪ ಇರಿಸಿದ್ದು, ಸರ್ಕಾರ ಅದನ್ನು ನೋಡಿಕೊಳ್ಳುತ್ತದೆ. ಸುಂಕದ ವಿಷಯ ಮನೆ ನಿರ್ಮಾಣ ನಿರ್ಧಾರಕ್ಕೆ ಅಡ್ಡಿಯಾಗದು ಎಂದಿ ದ್ದಾರೆ. ಪ್ರತಿ ಟನ್‌ಗೆ ೧೫೦ ರು. ತೆರಿಗೆಯನ್ನು ಕೇಂದ್ರ ಸರ್ಕಾರ ಹಾಕಿದೆ. ಅದನ್ನು ರಾಜ್ಯಕ್ಕೆ ಪಾವತಿಸಲಾಗುತ್ತದೆ. ಸಂತ್ರಸ್ತರಿಗೆ ಕೋಟ್ಯಂತರ ರು. ನೆರವು ನೀಡುತ್ತಿರುವಾಗ, ಸುಂಕ ಎಷ್ಟು ಸರಿ ಎಂಬುದು ಗಣಿ ಮಾಲೀಕರ ಪ್ರಶ್ನೆಯಾಗಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು. 
ಸಿ‌ಎಂ ಔಟ್‌ಬರ್ಸ್ಟ್ ಆಗಿದ್ದರು: ನೆರೆ ಹಾವಳಿ- ಪರಿಹಾರ ವೀಕ್ಷಣೆಗಾಗಿ ಗದುಗಿಗೆ ಬಂದಾಗ ಜನರ ಅಹವಾಲು ಸ್ವೀಕರಿಸುವ ವೇಳೆ ಅವರು (ಯಡಿಯೂರಪ್ಪ) ಔಟ್‌ಬರ್ಸ್ಟ್ ಆಗಿದ್ದರು. ಸಹಜವಾಗಿಯೇ ಇದು ಅವರ ಕೋಪಕ್ಕೆ ಕಾರಣವಾಗಿತ್ತು ಎಂದು ರೆಡ್ಡಿ ಹೇಳಿದರು. ಜಿಲ್ಲಾಧಿಕಾರಿ ಒಳ್ಳೆಯವರಾಗಿದ್ರು, ಶ್ರೀರಾಮುಲು ಕೆಲಸಗಳಿಗೆ ಟೀಕಿಸುವ ಮಾತೇ ಬರೋಲ್ಲ. ಕರುಣಾಕರ ರೆಡ್ಡಿ ಖಾತೆ ನಿರ್ವಹಿಸುವಲ್ಲಿ ‘ಕೇಪಬಲ್’ ಆಗಿದ್ದಾರೆನ್ನುವ ಮೂಲಕ, ಮುಖ್ಯಮಂತ್ರಿ ಅವರ ಇತ್ತೀಚಿನ ನಿರ್ಧಾರಗಳಿಗೆ ಸಚಿವ ರೆಡ್ಡಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. 

ಹೆಲಿಕಾಪ್ಟರ್ ಕೊಟ್ಟಿದ್ದೆವು: ನೆರೆ ಅಧ್ಯಯನಕ್ಕಾಗಿ ಕೇಂದ್ರ ತಂಡದ ಅಧಿಕಾರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿದಾಗ, ಅದಕ್ಕೆ ಬಳ್ಳಾರಿ ಸಚಿವರು ಹಾಜರಾಗದಿರುವ ಬಗ್ಗೆ ತೂರಿಬಂದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರೆಡ್ಡಿ, ಅಧ್ಯಯನ ತಂಡಕ್ಕೆ ಹೆಲಿಕಾಪ್ಟರ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಒಬ್ಬೊಬ್ಬರಿಗೆ ಒಂದೊಂದು ಕೆಲಸ ಇರುತ್ತೆ. ಸಿ‌ಎಂ ಮಾಡೋ ಕೆಲಸ ಅವ್ರು ಮಾಡ್ತಾರೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.

ನನಗೂ ಅಸಮಾಧಾನ: ಪತ್ರಿಕಾಗೋಷ್ಠಿಯಲ್ಲಿದ್ದ ಇಂಧನ ಸಚಿವ ಈಶ್ವರಪ್ಪ, ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹ ಭಿನ್ನಮತ ಸಹಜ. ನನಗೂ ಈ ಹಿಂದೆ ಅಸಮಾಧಾನ ಆಗಿತ್ತು. ಆಮೇಲೆ ಬಗೆಹರಿಸಲಾಯಿತು ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ಸೌಜನ್ಯ: ಕನ್ನಡಪ್ರಭ


Share: