ದಾವಣಗೆರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಸಾಲುಮರದ ವೀರಾಚಾರಿ (70) ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಂಗಳವಾರ ವರದಿಯಾಗಿದೆ.
ನ್ಯಾಯಬೆಲೆ ಅಂಗಡಿಯ ಭ್ರಷ್ಟಾಚಾರ, ಅವ್ಯ ವಹಾರದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವೀರಾಚಾರಿ ಅವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮಿಟ್ಲಕಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿತ್ತು ಎನ್ನಲಾದ ಅವ್ಯವಹಾರ, ಆಹಾರ ಧಾನ್ಯ ದುರ್ಬಳಕೆ ವಿರುದ್ಧ ಕೊರೋನ ಆರಂಭದಿಂದಲೂ ವೀರಾಚಾರಿ ಅವರು ಸಂಬಂಧಿಸಿದ ಎಲ್ಲ ಕಚೇರಿಗಳಿಗೂ ತೆರಳಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ಅಂಗಡಿಯ ಅನ್ಯಾಯದ ವಿರುದ್ಧ ಶನಿವಾರ ಕೂಡ ಗ್ರಾಮಸ್ಥರ ಜೊತೆಗೆ ತೆರಳಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.
“ತಮ್ಮ ಊರಿನ ಬಡವರಿಗೆ ನನ್ನಿಂದ ನ್ಯಾಯ ಕೊಡಿಸಲಾಗದಿದ್ದರೆ, ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ, ಜನರಿಗೆ ನ್ಯಾಯ ಸಿಗದಿದ್ದರೆ, ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣು' ಎಂಬುದಾಗಿ ಸ್ವತಃ ಪ್ಲೆಕ್ಸ್ ಮಾಡಿಸಿ ವೀರಾಚಾರಿ ಅವರು ವಾಗ್ದಾನ ಮಾಡಿದ್ದರು. ಮಂಗಳವಾರ ಬೆಳಗಿನ ಜಾವ 2 ಗಂಟೆಯ ಸಮಯದಲ್ಲಿ ಗ್ರಾಮದ ಮಧ್ಯ ಭಾಗದಲ್ಲಿ ರಸ್ತೆ ಬದಿಯಲ್ಲಿ ತಾವೇ ಬೆಳೆಸಿದ್ದ ಮರವೊಂದಕ್ಕೆ ನೇಣು ಹಾಕಿಕೊಂಡು ವಾಗ್ದಾನದಂತೆಯೇ ಆತಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವೀರಾಚಾರಿ ಅವರು ಆತ್ಮಹತ್ಯೆ ಮಾಡಿದ ವಿಚಾರ ನಸುಕಿನಲ್ಲೇ ಇಡೀ ಗ್ರಾಮದಲ್ಲಿ ಹಬ್ಬಿದೆ. ತಕ್ಷಣವೇ ಮನೆಯಿಂದ ಬಂದ ಗ್ರಾಮಸ್ಥರು ವೀರಾಚಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಮರದ ಕಟ್ಟೆಯ ಬಳಿ ಜಮಾಯಿಸಿ, ಗ್ರಾಮದ ರಸ್ತೆಯನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಮುಂಜಾಗ್ರತೆಯಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.