ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ನಿರ್ಮೂಲನವಾಗುವ ದಿನ ಬರಲಿದೆ. ಸಚಿವ ಝಮೀರ್ ಅಹ್ಮದ್ ಹೇಳಿಕೆ.

ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ನಿರ್ಮೂಲನವಾಗುವ ದಿನ ಬರಲಿದೆ. ಸಚಿವ ಝಮೀರ್ ಅಹ್ಮದ್ ಹೇಳಿಕೆ.

Thu, 07 Sep 2023 05:09:10  Office Staff   SO News

ಮಂಗಳೂರು : ಪ್ರಧಾನಿ ಮೋದಿಯವರ ಅಚ್ಛೇದಿನ್ ಬಡ ಜನರಿಗೆ ಬಾರದೇ, ಬಿಜೆಪಿ ನಾಯಕರಿಗೆ ಮಾತ್ರ ಬಂದಿದೆ. ಬಡವರ ಬಗ್ಗೆ ಬಿಜೆಪಿ ಗೆ ಕಾಳಜಿಯಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ನಿರ್ಮೂಲನೆ ಆಗಲಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಮಂಗಳೂರು ಪ್ರವಾಸದ ನಿಮಿತ್ತ ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು  ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕರ್ತರ ದುಡಿಮೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅವರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡಬೇಕು. ಜನರು ನಂಬಿ ನಮ್ಮನ್ನು ಆರಿಸಿದ್ದಾರೆ. ಅದರಂತೆ ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಅಧಿಕಾರವಧಿಯಲ್ಲಿ ಅಲ್ಪಸಂಖ್ಯಾತರಿಗಿದ್ದ ಪ್ರಮುಖ ಯೋಜನೆಗಳನ್ನು ಕಡಿತಗೊಳಿಸಲಾಗಿದೆ. ಬಿಜೆಪಿ ಸಾಧನೆ ತೋರಿಸಿ ಮತ ಕೇಳುವುದಿಲ್ಲ. ಬದಲಾಗಿ ಜಾತಿ, ಧರ್ಮದ ಮಧ್ಯೆ ಒಡಕನ್ನುಂಟು ಮಾಡಿ ಮತ ಕೇಳುತ್ತದೆ. ಇವರ ಸಾಧನೆ ಶೂನ್ಯ. ಆದರೆ, ಕಾಂಗ್ರೆಸ್ ಸಾಧನೆ ತೋರಿಸಿ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.

ಚುನಾವಣೆ ದೃಷ್ಟಿಯಿಂದ ಗ್ಯಾಸ್ ಬೆಲೆ ಇಳಿಕೆ ಮಾಡಲಾಗಿದ್ದು, ಚುನಾವಣೆ ಬಳಿಕ ಹೆಚ್ಚಾಗಲಿದೆ. ನಮ್ಮ ಭಾಗದ ಜನರಿಗೆ ಬಿಜೆಪಿಯ ಬಗ್ಗೆ ಅರ್ಥವಾಗಿದೆ. ಈ ಭಾಗದ ಜನರಿಗೆ ಮುಂದೆ ಅರ್ಥ ಆಗಲಿದೆ ಎಂದವರು, ಮುಂದಿನ ಲೋಕಸಭಾ, ಸ್ಥಳೀಯಾಡಳಿತ ಚುನಾವಣೆಗೆ ಕಾರ್ಯಕರ್ತರು, ನಾಯಕರು ಕಾರ್ಯಪ್ರವೃತ್ತರಾಗಿ ದುಡಿಯಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಪೌರಾಡಳಿತ, ಹಜ್ ಸಚಿವ ರಹೀಂ ಖಾನ್ ಮಾತನಾಡಿದರು. ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಹಿರಿಯರಾದ ಕಣಚೂರ್ ಮೋನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೆ.ಎ.ಬಾವ, ಇನಾಯತ್ ಅಲಿ, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಭಾಸ್ಕರ್.ಕೆ, ಮುಖಂಡರಾದ ಲುಕ್ಮಾನ್ ಬಂಟ್ವಾಳ್, ಡಾ.ರಘು, ಜೋಕ್ಕಿಂ ಡಿಸೋಜ, ಸುಹಾನ್ ಆಳ್ವ, ಲಾರೆನ್ಸ್ ಡಿಸೋಜ, ಅಬ್ಬಾಸ್ ಅಲಿ, ಸುಭಾಷ್ ಶೆಟ್ಟಿ ಕೊಳ್ನಾಡ್, ನಾರಾಯಣ್ ನಾಯ್ಕ್, ಎಂ.ಎಸ್. ಮಹಮ್ಮದ್, ಚೇತನ್ ಬೆಂಗ್ರೆ, ಟಿ.ಎಂ.ಶಹೀದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರೇ  ಶಬ್ಬೀರ್.ಎಸ್ ವಂದಿಸಿದರು. ಕೆ.ಕೆ.ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.


Share: