ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ-ಸಿದ್ಧರಾಮಯ್ಯ

ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ-ಸಿದ್ಧರಾಮಯ್ಯ

Tue, 30 Jan 2024 01:03:30  Office Staff   SOnews


ಬೆಂಗಳೂರು : ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. 
ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಸ್ತ ಕೇರಳ ಜಮೀಯ್ಯತುಲ್ ಉಲೆಮಾ ಸಂಘಟನೆಯ ಶತಮಾನೋತ್ಸವ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಾವು ನಮ್ಮ ಧರ್ಮ ಅನುಸರಿಸಿ, ಅನ್ಯ ಧರ್ಮವನ್ನು ಗೌರವಿಸಬೇಕು. ಕುವೆಂಪು ಹೇಳುವಂತೆ ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದ ಅವರು, ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆ 100 ವರ್ಷ ಪೂರೈಸಿರುವುದು ಒಂದು ಮೈಲಿಗಲ್ಲು. ಇಂತಹ ನೂರನೆ ವರ್ಷದ ಆಚರಣೆ ಮಾಡುವಾಗ ನಾವು ಬಂದಿರುವ ಹಾದಿ ನೋಡಬೇಕು. ಮುಂದಿನ ಗುರಿ ನೋಡಿ, ಅದನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಇಸ್ಲಾಂ ಧರ್ಮ ಬಹಳ ಹಳೆಯ ಧರ್ಮ. ನೀವು ಇಸ್ಲಾಂ ಆಚರಣೆ ಮಾಡುತ್ತೀರಿ, ನಾನು ಹಿಂದೂ ಧರ್ಮ ಆಚರಣೆ ಮಾಡುತ್ತೇನೆ. ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಸಂವಿಧಾನ ಹೇಳುತ್ತ ನಾವು ಮನುಷ್ಯರಾಗಿ ಸೌಹಾರ್ದ ಭಾವನೆ ಮೂಡಿಸಬೇಕು. ಇಸ್ಲಾಂ ಶಾಂತಿ ಸಹನೆ ಬೋಧಿಸುತ್ತದೆ. ಸಂವಿಧಾನ ಸಹಿಷ್ಣುತೆ ಹಾಗೂ ಸಹಬಾಳ್ವೆ ಬೋಧಿಸುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಸಂವಿಧಾನದಲ್ಲಿ ಉಚಿತ ಶಿಕ್ಷಣ ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದೆ. ಸಮಸ್ತ ಸಂಘಟನೆಯು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಮುಸ್ಲಿಮ್ ಸಮಾಜ ಶಿಕ್ಷಣ ಪಡೆದರೆ ಸ್ವಾಭಿಮಾನದಿಂದ ಬದುಕುವ ಶಕ್ತಿ ‌ಬರುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


Share: