ಕಾರವಾರ : ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಿಗೆ ಸಬ್ಸಿಡಿ ನೀಡುತ್ತಿದ್ದು ಅವುಗಳ ಮಾಹಿತಿ ಪಡೆದುಕೊಂಡು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಹೇಳಿದರು.
ಶನಿವಾರ ಮುಡಗೇರಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಅವರು, 2005 ರಿಂದ 2023 ರ ವರೆಗೆ ಅಂದರೆ 18 ವರ್ಷಗಳ ಕಾಲ ಭೂಮಿಯನ್ನು ಕಳೆದು ಕೊಂಡ ಈ ಭಾಗದ ಜನರು ಕಷ್ಟು ಪಡುತ್ತಿದ್ದರು ಇವತ್ತು ಇವರಿಗೆ ಯೋಗ್ಯ ರೂ.50 ಲಕ್ಷ ಪರಿಹಾರವನ್ನು ಸರ್ಕಾರದಿಂದ ನೀಡಲಾಗಿದೆ ಎಂದರು. ಬೇರೆ ಜಿಲ್ಲೆಗಳಲ್ಲಿ ಇಷ್ಟೊಂದು ಮೊತ್ತದ ಪರಿಹಾರವನ್ನು ಒದಗಿಸಿಲ್ಲ ಇವತ್ತು ಈ ಭಾಗದ ಜನರಿಗೆ ಪರಿಹಾರವನ್ನು ಕಲ್ಪಿಸಿ ಕೊಡಲಾಗಿದೆ. ಭೂಮಿಯನ್ನು ಕಳೆದು ಕೊಂಡವರಿಗೆ ಪರಿಹಾರದ ಜೊತೆಗೆ ಅವರು ಮಕ್ಕಳಿಗೆ ಉದ್ಯೋಗ ನೀಡಲು ಪ್ರಯತ್ನಿಸಲಾಗುವುದು ಎಂದರು.
ಇಂದು ಈ ಭಾಗದ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಕ್ಕೆ ಹೋಗುತ್ತಿದ್ದು ಅದನ್ನು ತಪ್ಪಿಸಲು ರಾಜ್ಯದಲ್ಲಿಯೇ ಅಂತಹ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೀಡಲು ಸರ್ಕಾರ ಯೋಜನೆಯ ರೂಪಿಸಿದ್ದು ಅದಕ್ಕಾಗಿಯೇ 10 ಲಕ್ಷ ಕೋಟಿ ಹೂಡಿಕೆ ಮಾಡಿ 7.5 ಲಕ್ಷ ಯುವಕರಿಗೆ ಉದ್ಯೋಗ ನೀಡುವುದು ಯೋಜನೆಯ ರೂಪಿಸಿದ್ದೇವೆ ಎಂದರು.
ಕೈಗಾರಿಕೆ ಇಲಾಖೆಯಿಂದ ಸ್ವಯಂ ಉದ್ಯೋಗ ಕೈಕೊಳ್ಳಲು ವಿವಿಧ ಕೈಗಾರಿಕಾ ತರಬೇತಿಗಳನ್ನು ನೀಡಿ ಅವರಿಗೆ ಬ್ಯಾಂಕುಗಳಿಂದ ಸಾಲ ಒದಗಿಸಿ ಸ್ವಂತ ಜೀವನ ಕಟ್ಟಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಮಹಿಳೆಯರಿಗೆ ಕೂಡ ಇಂದು ಸಾಕಷ್ಟು ಅವಕಾಶಗಳಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರತಿ 2 ಎಕರೆ ಜಮೀನು ಇದ್ದರೆ ಅವರಿಗೆ 75 ರಷ್ಟು ಸಬ್ಸಿಡಿ ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಯಂತ್ ಎಚ್. ವಿ, ನಗರ ಸಭೆ ಅಧ್ಯಕ್ಷರ ನಿತೀನ್ ಪಿಕಳೆ, ಉಪಾಧ್ಯಕ್ಷ ಪಿ ಪಿ ನಾಯ್ಕ,ಮುಡಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೀಮಾ ನಾಯ್ಕ, ಉಪಾಧ್ಯಕ್ಷರು ಸುನಿಲ್ ನಾಯ್ಕ, ವಿಶೇಷ ಭೂ ಸ್ವಾದಿನ ಅಧಿಕಾರಿ ಮಮತಾ ಹಾಗೂ ಮುಡಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು