ಬೀದರ : ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಏಳನೇ ಸಭೆಯು ಶರಣ ಕ್ರಾಂತಿಯ ನೆಲವಾದ ಬಸವಕಲ್ಯಾಣ ಪಟ್ಟಣದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್ ವಾಯುನೆಲೆಗೆ ಆಗಮಿಸಿ, ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ಬಂದಿಳಿದ ಮುಖ್ಯಮಂತ್ರಿಗಳು, ಮೊದಲಿಗೆ ಬಿಕೆಡಿಬಿ ಹತ್ತಿರದಲ್ಲಿನ ಹೆಲಿಪ್ಯಾಡನಲ್ಲಿ ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು. ಬಳಿಕ ನೇರವಾಗಿ ಬಿಕೆಡಿಬಿ ಕಚೇರಿಗೆ ಆಗಮಿಸಿ, ಮಹತ್ವದ ಸಭೆಗೆ ಆಗಮಿಸುತ್ತಿದ್ದಂತೆ ಸಚಿವರು, ಶಾಸಕರು ಮತ್ತು ಇನ್ನೀತರ ಗಣ್ಯರು ಗೂಗುಚ್ಛ ನೀಡಿ ಸ್ವಾಗತ ಕೋರಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಮೊದಲಿಗೆ ಸಭೆಗೆ ಸ್ವಾಗತ ಕೋರಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ 7ನೇ ಸಭೆಯ ವಿಷಯ ಸೂಚಿಗಳನ್ನು ಸಭೆಗೆ ಓದಿ ಹೇಳಿದರು. ನೂತನ ಅನುಭವ ಮಂಟಪದ ನಮಿತ್ತ ತುರ್ತಾಗಿ ಬೇಕಾಗಿದ್ದ 31 ಎಕರೆ 6 ಗುಂಟೆ ಖಾಸಗಿ ಜಮೀನುಗಳನ್ನು ಅನುಭವ ಮಂಟಪ ಯೋಜನಾ ಸಮಿತಿಯ ಸಭೆಯಲ್ಲಿ ಅನುಮೋದನೆ ಪಡೆದು 12.70 ಕೋಟಿಗಳಲ್ಲಿ ನೇರ ಖರೀದಿ ಮಾಡಲಾಗಿದೆ. ಅನುಭವ ಮಂಟಪದ ನಿಮಿತ್ತ ಕರೆದಿರುವ ಟೆಂಡರ್ ಪ್ರಕ್ರಿಯೆಯು ಪ್ರಸ್ತುತ ತಾಂತ್ರಿಕ ಬಿಡ್ ಮೌಲ್ಯಮಾಪನ ಹಂತದಲ್ಲಿದೆ ಎಂದು ತಿಳಿಸಿದರು. ಒಟ್ಟು 63 ಎಕರೆ 14 ಗುಂಟೆ ಜಮೀನು ಲಭ್ಯವಿದ್ದು ಕಾಮಗಾರಿಯನ್ನು ಆರಂಭಿಸಲು ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯು, ಪರುಷ ಕಟ್ಟೆ ಪ್ರದೇಶದ ಸಮಗ್ರ ಅಭಿವೃದ್ಧಿ ಮೇಲುಸ್ತುವಾರಿಯನ್ನು ನೂತನ ಅನುಭವ ಮಂಟಪ ಯೋಜನಾ ಅನುಷ್ಠಾನ ಸಮಿತಿಗೆ ವಹಿಸುವ ಮತ್ತು ನೂತನ ಅನುಭವ ಮಂಟಪಕ್ಕಾಗಿ ಬಿಡುಗಡೆಯಾದ ಅನುದಾನದ ಬಡ್ಡಿಯನ್ನು ಮಂಡಳಿಯ ಅವಶ್ಯಕ ಕೆಲಸಗಳಿಗೆ ಉಪಯೋಗಿಸುವ ಮಹತ್ವದ ಕಾರ್ಯಗಳಿಗೆ ಒಪ್ಪಿಗೆ ಸೂಚಿಸಿತು. ನೂತನ ಅನುಭವ ಮಂಟಪ ನಿರ್ಮಾಣದ ನಿಮಿತ್ತ ರಚಿತವಾದ ಯೊಜನಾ ಅನುಷ್ಠಾನ ಸಮಿತಿಯು ತೆಗೆದುಕೊಂಡ ನಿರ್ಣಯಗಳಿಗೂ ಕೂಡ ಸಭೆಯು ಅನುಮೋದನೆ ನೀಡಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ನೂತನ ಅನುಭವ ಮಂಟಪದ ನಿಮಿತ್ತ ಸರ್ಕಾರದಿಂದ ಬಿಡುಗಡೆಯಾಗಿರುವ 200 ಕೋಟಿ ರೂ.ಗಳಲ್ಲಿ 20 ಕೋಟಿ ರೂ.ಗಳನ್ನು ಪರುಷ ಕಟ್ಟೆ ಅಭಿವೃದ್ಧಿ ಕೆಲಸಗಳಿಗಾಗಿ ಉಪಯೋಗಿಸಲು ಸಭೆಯಲ್ಲಿ ಅನುಮೋದನೆ ಕೊಟ್ಟಿದ್ದೇವೆ. ಅನುಭವ ಮಂಟಪ ಯೋಜನೆಗಾಗಿ ಜಮೀನುಗಳನ್ನು ನೇರ ಖರೀದಿ ಮಾಡಿದ 12.70 ಕೋಟಿ ರೂ.ಗಳ ಮೊತ್ತಕ್ಕೆ ಕೂಡ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಕೇಳಿ ಬಂದ ಎಲ್ಲ ಸಲಹೆಗಳನ್ನು ಪರಿಗಣಿಸಲಾಗುವುದು. ಇಡೀ ವಿಶ್ವದ ಜನರೇ ಬಂದು ನೋಡುವಂತಹ ರೀತಿಯಲ್ಲಿ ಅನುಭವ ಮಂಟಪವನ್ನು ನಿರ್ಮಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಕಾಲ ಕೂಡಿ ಬಂದಿದೆ. ನಮ್ಮ ಅವಧಿಯಲ್ಲಿ ವಿನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವುದು ನಾವು ಪುಣ್ಯಶಾಲಿಗಳು ಎಂದು ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು.
ವಿನೂತನ ಅನುಭವ ಮಂಟಪ ನಿರ್ಮಾಣಕ್ಕೆ ಬೇಕಾದ ಜಮೀನನ್ನು ಪಡೆದುಕೊಳ್ಳಲು ಬಸವರಾಜ ಪಾಟೀಲ ಸೇಡಂ ಅವರು, ಸಂಸದರು, ಸಚಿವರು, ಸ್ಥಳೀಯ ಶಾಸಕರು ಎಲ್ಲರೂ ಸೇರಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಿರಿಯರಾದ ಬಿ. ಎಸ್. ಯಡಿಯೂರಪ್ಪ ಅವರ ಆಶೀರ್ವಾದದಿಂದ ಇಂತಹ ಮಹತ್ವದ ಕಾರ್ಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸ್ಮಾರಕಗಳ ರಕ್ಷಣೆಗೆ ಒತ್ತು: ಈ ವೇಳೆ ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಬಸವಕಲ್ಯಾಣದಲ್ಲಿ ಮಹಾಪುರುಷರ ಸ್ಮಾರಕಗಳ ಅತಿಕ್ರಮಣವಾಗುತ್ತಿದ್ದು, ಅವುಗಳನ್ನು ರಕ್ಷಣೆ ಮಾಡುವುದು ಅತೀ ಅವಶ್ಯವಿದೆ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸ್ಮಾರಕಗಳ ಅತೀಕ್ರಮಣ ತಡೆಯಲು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸ್ಮಾರಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅನುದಾನ ಅವಶ್ಯಕತೆಯಿದ್ದಲ್ಲಿ ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವರಾದ ಪ್ರಭು ಚಹ್ವಾಣ್, ಚಿಂತಕರಾದ ಬಸವರಾಜ ಪಾಟೀಲ ಸೇಡಂ, ಕಲಬುರಗಿ ಸಂಸದರಾದ ಡಾ.ಉಮೇಶ ಜಾದವ್, ಕೆಕೆಆರ್ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ, ವಿಶೇಷ ಆಹ್ವಾನಿತರಾಗಿ ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ರಹೀಂ ಖಾನ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ, ಶಶೀಲ್ ಜಿ ನಮೋಶಿ, ಭೀಮರಾವ್ ಪಾಟೀಲ,
ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷರು ಹಾಗೂ ಅನುಭವ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರಾದ ಅರವಿಂದ ಜತ್ತಿ, ಬಿಕೆಡಿಬಿ ಸದಸ್ಯರಾದ ಶಿವರಾಜ ನರಶೆಟ್ಟಿ, ಕಿರಣ್ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚೆನ್ನೂರ, ಕಂದಾಯ, ಆರ್ಥಿಕ, ಪ್ರಾಚ್ಯವಸ್ತು ಸಂಗ್ರಾಹಾಲಯ, ಪೌರಾಡಳಿತ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.