ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಜ್ಪೆ: ಸೌಹಾರ್ದಕ್ಕೆ ತೊಡಕಾಗಿದ್ದ ಬ್ಯಾನರ್ ಕಳ್ಳನ ಪತ್ತೆ

ಬಜ್ಪೆ: ಸೌಹಾರ್ದಕ್ಕೆ ತೊಡಕಾಗಿದ್ದ ಬ್ಯಾನರ್ ಕಳ್ಳನ ಪತ್ತೆ

Fri, 09 Oct 2009 04:52:00  Office Staff   S.O. News Service
ಮಂಗಳೂರು, ಅ.8: ಬಜಪೆಯ ಕಿನ್ನಿಪದವು ಪ್ರದೇಶದಲ್ಲಿ ಕೆಲವು ತಿಂಗಳಿನಿಂದ ಹಿಂದೂ ಧಾರ್ಮಿಕ ಸಮಾರಂಭಗಳಿಗೆ ಸಂಬಂಧಿಸಿದ ಬ್ಯಾನರ್‌ಗಳು ಕಟ್ಟಿದ ಮರುದಿನವೇ ನಾಪತ್ತೆಯಾಗುತ್ತಿತ್ತು. ಇದರಿಂದಾಗಿ ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸವಾಗಿರುವ ಮುಸ್ಲಿಂ ಸಮುದಾಯದ ನಿವಾಸಿಗಳ ಬಗ್ಗೆ ಸ್ಥಳೀಯ ಹಿಂದೂ ಧಾರ್ಮಿಕ ಸಂಘಟನೆಗಳ ಸದಸ್ಯರು ಸಂಶಯದಿಂದ ದ್ವೇಷ ಭಾವನೆ ಹೊಂದುವ  ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾವುದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕೋಮು ದ್ವೇಷದ ಗಲಭೆಗಳು ಸಂಭವಿಸುವ ಸಾಧ್ಯತೆ ಇತ್ತು. ಸ್ಥಳೀಯ ನಿರಪರಾಧಿಗಳು ಇದರಿಂದ ಕಷ್ಟ ನಷ್ಟಗಳನ್ನು ಅನುಭವಿಸಬೇಕಾದ ವಾತಾವರಣ ನಿರ್ಮಾಣ ಉಂಟಾಗಿತ್ತು. ಆದರೆ ಈ ಬಗ್ಗೆ ತಾಳ್ಮೆ ವಹಿಸಿದ ಸ್ಥಳೀಯರು ಬ್ಯಾನರ್ ಕಳವು ಮಾಡುತ್ತಿದ್ದ ಅರೋಪಿ ಯಾರು ಎನ್ನುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಕಿನ್ನಿಪದವು ಪ್ರದೇಶದ ಹಿಂದೂ ಧಾರ್ಮಿಕ ಸಮಾರಂಭದ ಬ್ಯಾನರ್‌ಗಳನ್ನು ಕದಿಯುತ್ತಿದ್ದ, ಕೋಮುದ್ವೇಷಕ್ಕೆ ಕಾರಣವಾಗಿರುವುದು ಸ್ಥಳೀಯ ಕ್ಯಾಂಟೀನ್ ನಡೆಸುತ್ತಿದ್ದ ರವಿಶೆಟ್ಟಿ ಎಂಬ ಹಿಂದೂ ಎನ್ನುವುದು ಕೊನೆಗೂ ಬಹಿರಂಗಗೊಂಡಿದೆ. 

ಪೊಲೀಸರಿಂದ ಸೌಹಾರ್ದ ಸಭೆ

ಕಿನ್ನಿಪದವು ಪ್ರದೇಶದಲ್ಲಿ ಹಿಂದೂ- ಮುಸ್ಲಿಮರ ನಡುವೆ ಕೋಮುದ್ವೇಷದ ಭಾವನೆ ಉಂಟಾಗಲು ಕಾರಣವಾದ ವ್ಯಕ್ತಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಬಳಿಕ ಅಲ್ಲಿನ ಹಿಂದು ಮತ್ತು ಮುಸ್ಲಿಂ ಸಮುದಾಯದ ಮುಖಂಡರನ್ನು ಠಾಣೆಗೆ ಕರೆದ ಪೊಲೀಸರು ಜನರಲ್ಲಿ ಉಂಟಾಗಿದ್ದ ಸಂಶಯವನ್ನು ನಿವಾರಿಸಿದರು. ಇಂತಹ ಸಂದರ್ಭದಲ್ಲಿ ಯಾರು ದುಡುಕಬಾರದು. ಆಗ ಕಿಡಿಗೇಡಿಗಳನ್ನು ಹಿಡಿಯಲು ಸಾಧ್ಯ.

 ಇಂತಹ ಕಿಡಿಗೇಡಿಗಳನ್ನು ದೂರವಿಡಬೇಕು. ಆ ಮೂಲಕ ಸೌಹಾರ್ದತೆಯನ್ನು ಕಾಪಾಡಲು ಸಹಕಾರ ನೀಡಬೇಕು ಎಂದು ಕಿನ್ನಿಪದವು ಪ್ರದೇಶದಲ್ಲಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

Share: