ಹಾಸನ, ಡಿಸೆಂಬರ್ 17: ಚಾಮರಾಜನಗರ ಮತ್ತು ದಾವಣಗೆರೆ ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡಿಸಿ ಕನ್ನಡಸೇನೆ ಕಾರ್ಯಕರ್ತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.
ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ತೆರಳಿ ಧರಣಿ ಸತ್ಯಾಗ್ರಹ ನಡೆಸಿದರಲ್ಲದೇ ಸರಕಾರದ ದುರಾಡಳಿತದ ವಿರುದ್ಧ ಘೋಷಣೆ ಕೂಗಿದರು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಅನ್ನದಾತನ ಮೇಲೆ ಆಗ್ಗಿಂದಾಗ್ಗೆ ಲಾಠಿ ಬೀಸಲಾಗುತ್ತಿದೆ. ಜಿಲ್ಲಾಧಿಕಾರಿಯೊಬ್ಬರು ರೈತರ ಮೇಲೆ ಹಲ್ಲೆ ನಡೆಸಲು ಲಾಠಿ ಹಿಡಿಯುವಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಾದರೂ ರೈತರ ಬೇಡಿಕೆ ಈಡೇರಿಸುವ ಮೂಲಕ ಮಾಡಿರುವ ತಪ್ಪನ್ನು ಮುಖ್ಯಮಂತ್ರಿ ತಿದ್ದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧರ್ಮರಾಜ್ ಕಡಗ, ರವಿಕುಮಾರ್, ಸೈಯದ್ ಅನ್ಸರ್, ಕೃಷ್ಣೇಗೌಡ ಇತರರು ನೇತೃತ್ವ ವಹಿಸಿದ್ದರು.
ಹಣ ಮತ್ತು ತೋಳ್ಬಲಕ್ಕೆ ವಿರುದ್ಧವಾಗಿ ಮಾದರಿ ಚುನಾವಣೆ ನಡೆಯಬೇಕೆಂಬ ಮಹದಾಸೆಯಿಂದ ತಾವು ಸ್ವಾಭಿಮಾನಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದು, ಚುನಾವಣಾ ಫಲಿತಾಂಶದಲ್ಲಿ ಪವಾಡ ನಡೆಯಲಿದೆ ಎಂದು ಬೋರೆಯಳ್ಳಿ ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬೋರೆಹಳ್ಳಿ ವೆಂಕಟೇಶ್ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಯಾವುದೇ ಮತದಾರರಿಗೆ ಯಾವುದೇ ಹಣದ ಆಮಿಷೆ ಇಲ್ಲದೆ ಜಿಲ್ಲೆಯ 4072 ಮತದಾರರಿಗೂ ಪತ್ರದ ಮೂಲಕ ಮತ ಕೋರಿ ಮನವಿ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ನ ಕೆಲವು ನಾಯಕರು ಬಿಜೆಪಿಯೊಂದಿಗೆ ರಾತ್ರಿ ವೇಳೆಯ ಮಾತುಕತೆಯ ಮೂಲಕ ಚುನಾವಣೆ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಹಣ ಮತ್ತು ತೋಳ್ಬಲವನ್ನು ಮಿತಿ ಮೀರಿ ಬಳಕೆ ಮಾಡಿಕೊಳ್ಳುತ್ತಿವೆ. ಇಂತಹ ರಾಜಕೀಯದಿಂದ ಬೇಸತ್ತಿರುವ ಸ್ಥಳೀಯ ಸಂಸ್ಥೆಗಳ ಮತದಾರರು ತಮ್ಮ ಬೆಂಬಲಕ್ಕೆ ನಿಂತಿರುವುದರಿಂದ ಗೆಲ್ಲುವ ವಿಶ್ವಾಸದಲ್ಲಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ರೆಸಾರ್ಟ್ ರಾಜಕೀಯ ಬೆಳವಣಿಗೆ ಕುರಿತಂತೆ ಬೇಸರ ವ್ಯಕ್ತಪಡಿಸಿದ ವೆಂಕಟೇಶ್, ಯಾರು ವೈರಿ, ಯಾರು ಸ್ನೇಹಿತರೆಂದು ಅರಿಯದ ಸ್ಥಿತಿ ಎದುರಾಗಿದೆ ಎಂದು ಕಳವಳ
ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್, ಉಮೇಶ್, ನವೀನ್ಕುಮಾರ್, ಯತೀಶ್, ಗುರುಸ್ವಾಮಿ ಉಪಸ್ಥಿತರಿದ್ದರು.