ಕುಂದಾಪುರ, ಏಪ್ರಿಲ್ ೨೪: ಸದಾ ಸುದ್ದಿಯಲ್ಲಿರುವ ತಾಲೂಕಿನ ಪಂಚಾಯತ್‌ಗಳಲ್ಲಿ ಮುಂಚೂಣಿಯಲ್ಲಿರುವ ನಾಡ ಗ್ರಾಮ ಪಂಚಾಯತ್ ಚುನಾವಣೆ ಎದುರಿಸಲು ಅಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಧುರೀಣರು ’ಪೌರ ಸಮಿತಿ’ ಹೆಸರಿನಲ್ಲಿ ಒಂದಾಗಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಮರವಂತೆ ತಾ.ಪಂ ಸದಸ್ಯರಾಗಿರುವ ಬಿಜೆಪಿ ಮುಖಂಡ ಸತೀಶ ಎಂ.ನಾಯಕ್ ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಮಾಜಿ ತಾ.ಪಂ ಸದಸ್ಯ ಕಾಂಗ್ರೆಸ್ ಮುಖಂಡ ಪ್ರಭು ಕೆನಡಿ ಪಿರೇರಾ ಕಾರ್ಯದರ್ಶಿಯಾಗಿರುವ ಸಮಿತಿಯಲ್ಲಿ ಉಭಯ ಪಕ್ಷಗಳಿಂದ ಈ ಹಿಂದೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅರವಿಂದ ಬಿಲ್ಲವ ಪಡುಕೋಣೆ, ವಾಸು ಪೂಜಾರಿ ಬಡಾಕೆರೆ,ಸೀನ ದೇವಾಡಿಗ, ಬೆಳ್ಳಾಡಿ ಶಂಕರ ಶೆಟ್ಟಿ, ಹೆಮ್ಮುಂಜೆ ರಾಜೀವ ಶೆಟ್ಟಿ, ಕಡ್ಕೆ ಪ್ರವೀಣ ಶೆಟ್ಟಿ ಮುಂತಾದವರಿದ್ದಾರೆ. ಕುಂದಾಪುರ ಪುರಸಭೆ ಹೊರತು ಪಡಿಸಿದರೆ ನಾಡ ಪಂಚಾಯತ್‌ನಲ್ಲಿ ಪ್ರಬಲವಾಗಿರುವ ಕಮ್ಯೂನಿಸ್ಟ್ ಪಕ್ಷವು ಇಲ್ಲಿನ ಕಾಂಗ್ರೆಸ್ - ಬಿಜೆಪಿ ದೋಸ್ತಿ ರಾಜಕೀಯಕ್ಕೆ ಸೆಡ್ಡು ಹೊಡೆಯಲು ’ನಾಗರಿಕ ಸಮಿತಿ’ ರಚಿಸಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷದ ಮೈತ್ರಿಕೂಟವು ಪಂಚಾಯತ್‌ನ ೨೭ ಕ್ಷೇತ್ರಗಳಲ್ಲಿ ೨೩ರಲ್ಲಿ ಜಯಗಳಿಸಿ ಕಾಂಗ್ರೆಸ್ ಅಧಿಕಾರದ ಸವಿ ಅನುಭವಿಸಿತ್ತು. ಜನತಾದಳದಿಂದ ಒಮ್ಮೆ ಉದ್ಯಮಿ ಅರುಣ್‌ಕುಮಾರ್ ಶೆಟ್ಟಿಯವರು ಮಂಡಲ ಪ್ರಧಾನರಾಗಿದ್ದುದು ಬಿಟ್ಟರೆ ಈ ಪಂಚಾಯತ್‌ನಲ್ಲಿ ಅತಿ ಹೆಚ್ಚು ಕಾಲ ಕಾಂಗ್ರೆಸ್ ಅಧಿಕಾರ ಅನುಭವಿಸಿದೆ. ಬಿಜೆಪಿ ಮತ್ತು ಕಮ್ಯೂನಿಸ್ಟರಿಗೆ ಪ್ರಮುಖ ಎದುರಾಳಿಯಾಗಿದ್ದು ಕಾಂಗ್ರೆಸ್ ಪಕ್ಷವೇ. ಕಳೆದ ಅವಧಿಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಕಮ್ಯೂನಿಸ್ಟ್ ಪಕ್ಷದ ಸ್ಥಳೀಯ ಪ್ರಮುಖ ಧುರೀಣ ರಾಜೀವ ಪಡುಕೋಣೆಯಾಗಲೀ, ಇಂದು ಕಾಂಗ್ರೆಸ್‌ನೊಂದಿಗೆ ’ಪೌರ ಸಮಿತಿ’ ಹೆಸರಿನಲ್ಲಿ ದೋಸ್ತಿ ಮಾಡಿಕೊಂಡಿರುವ ಬಿಜೆಪಿಯ ಪ್ರಮುಖ ಸತೀಶ ಎಂ.ನಾಯಕ್ ಇವರೆಲ್ಲರೂ ಕಾಂಗ್ರೆಸ್ ಪಕ್ಷದ ಪಾಳೆಗಾರಿಕೆ ರಾಜಕಾರಣವನ್ನು ವಿರೋಧಿಸಿಯೇ ನಾಡ ಗ್ರಾಮದಲ್ಲಿ ರಾಜಕಾರಣದಲ್ಲಿ ಮೇಲಕ್ಕೇರಿದವರು. ಮಾಜಿ ತಾ.ಪಂ. ಸದಸ್ಯ ಕಾಂಗ್ರೆಸ್‌ನ ಪ್ರಭು ಕೆನಡಿ ಪಿರೇರಾರವರನ್ನು ಸೋಲಿಸಿ ತಾ.ಪಂ. ಸದಸ್ಯರಾಗಿರುವವರು ಸತೀಶ ಎಂ.ನಾಯಕ್.
’ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಹಾಗೆಯೇ ಶಾಶ್ವತ ಮಿತ್ರರಿಲ್ಲ’ ಎಂಬ ಮಾತು ಇಂತಹ ಮೈತ್ರಿಕೂಟಗಳಿಗೆ ಅನ್ವಯಿಸಿ ಹೇಳುವುದನ್ನು ಆಗಾಗ ಕೇಳುತ್ತಿರುತ್ತೇವೆ. ಆ ಮಾತು ಇದೀಗ ನಾಡ ಗ್ರಾಮದ ಚುನಾವಣೆಯಲ್ಲಿಯೂ ನಿಜವಾಗಿದೆ. ಇನ್ನು ಮುಂದೆ ತಾ.ಪಂ, ಜಿ.ಪಂ, ವಿಧಾನಸಭಾ ಚುನಾವಣೆಗಳು ಬಂದಾಗ ಈ ಊರಿನ ದೋಸ್ತಿ ಕೂಟದ ರಾಜಕಾರಣಿಗಳು ಜನಸಾಮಾನ್ಯರನ್ನು ಯಾವ ಆಧಾರದಲ್ಲಿ ತಮ್ಮ ಪಕ್ಷಕ್ಕಾಗಿ ಮತ ನೀಡುವಂತೆ ವಿನಂತಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಆದರೆ ಪಕ್ಷಪ್ರೇಮ ಹೊಂದಿರುವ ಸಾಮಾನ್ಯ ಮತದಾರರಲ್ಲಿ ಇಂತಹ ಮೈತ್ರಿಕೂಟಗಳ ಬಗ್ಗೆ ಸದಭಿಪ್ರಾಯವಿಲ್ಲದಿರುವುದು ಅವರ ಮಾತುಗಳಲ್ಲಿ ತಿಳಿದು ಬರುತ್ತದೆ. ’ಪೌರ ಸಮಿತಿ’ಯ ಅಧ್ಯಕ್ಷರಾಗಿರುವ ಬಿಜೆಪಿಯ ಸತೀಶ ಎಂ.ನಾಯಕ್ ಜನರಿಗೆ ಪಕ್ಷ, ಸೈದ್ದಾಂತಿಕ ಭಿನ್ನಾಭಿಪ್ರಾಯ ಮರೆತು ಸಹಾಯ ಮಾಡುವ ಗುಣ ಹೊಂದಿರುವುದರಿಂದ ಜನರಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ. ಆರ್‌ಎಸ್‌ಎಸ್ ಹಿನ್ನೆಲೆಯ ನಾಯಕ್ ದೂರವಾಣಿಯಲ್ಲಿ ’ಹರಿಓಂ’ ಎಂದು ಮಾತು ಆರಂಭಿಸುವ ವ್ಯಕ್ತಿಯಾದರೂ ಸಹಾಯ ಯಾಚಿಸಿ ಬಂದವರ ಜಾತಿ ಮತ್ತು ರಾಜಕೀಯ ಹಿನ್ನೆಲೆ ನೋಡುವವರಲ್ಲ ಎಂದು ಹೇಳುವ ಅನೇಕ ಮಂದಿ ಇದ್ದಾರೆ. ಇಂಥ ಜನಪರ ಯುವಕನಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಮನೋಭಾವ ಸಲ್ಲದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ಪಕ್ಷದ ಮುಂದಾಳು ಆಗಿದ್ದು , ಎಲ್ಲೂ ಹೆಸರು ಕೆಡಿಸಿಕೊಳ್ಳದ ಪ್ರಭು ಕೆನಡಿ ಪಿರೇರಾ ತನ್ನ ರಾಜಕೀಯ ಎದುರಾಳಿ ಸತೀಶ್ ನಾಯಕರೊಂದಿಗೆ ಕೈಜೋಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳಿವೆ. ಎರಡೂ ಪಕ್ಷದ ಸಜ್ಜನ ಮುಖಂಡರ ಮುಂದಾಳತ್ವದಲ್ಲಿ ’ಪೌರ ಸಮಿತಿ’ ಪಂಚಾಯತ್ ಅಧಿಕಾರದ ಗದ್ದುಗೆ ಏರಿದರೆ ಗ್ರಾಮದ ಅಭಿವೃದ್ಧಿಗೆ ಅನುಕೂಲ(ಈ ಮೈತ್ರಿ ಸಹಿಸದವರು ಕಾಂಗ್ರೆಸ್-ಬಿಜೆಪಿಯವರಿಗೆ ಜೊತೆಯಲ್ಲೇ ಲೂಟಿ ಹೊಡೆಯಲು ಅನುಕೂಲ ಎಂದು ಹೇಳುತ್ತಾರೆ)ಎಂದು ಹೇಳುವವರೂ ಸಾಕಷ್ಟು ಜನರಿದ್ದಾರೆ.
ಅದೇನೇ ಇರಲಿ, ಕಾಂಗ್ರೆಸ್-ಬಿಜೆಪಿ ದೋಸ್ತಿಯ ಲಾಭ ಪಡೆಯಲು ಕಮ್ಯೂನಿಸ್ಟರು ಚುರುಕಾಗಿದ್ದಾರೆ. ಕಾಂಗ್ರೆಸ್ ಜೊತೆಗೆ ಹೋಗಲು ಕಮ್ಯೂನಿಸ್ಟರಿಗೆ ’ಕೋಮುವಾದಿ ಶಕ್ತಿಗಳನ್ನು ದೂರವಿಡಲು’ ಎಂಬ ನೆವವಾದರೂ ಇತ್ತು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸಮಾನ ಹಿತಾಸಕ್ತಿಗಳೇನು ಎಂದು ಅವರು ಜನರಿಗೆ ವಿವರಿಸಲು ತೊಡಗಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆಯು ತಮ್ಮ ಪಕ್ಷದ ಹೋರಾಟದ ಫಲ ಎಂದು ಬಿಂಬಿಸುವಲ್ಲಿ ರಾಜೀವ ಪಡುಕೋಣೆ ಯತ್ನಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಎಲ್ಲ ಕ್ಷೇತ್ರಗಳಿಗೂ ಕಮ್ಯೂನಿಸ್ಟ್ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸುವ ಸಾಧ್ಯತೆಗಳು ಕಂಡು ಬರುತ್ತಿವೆ.
ನಾಡ ಗ್ರಾಮದಲ್ಲಿನ ಈ ದಿಢೀರ್ ಬೆಳವಣಿಗೆಗಳನ್ನು ಹಾಲಿ ಬೈಂದೂರು ಶಾಸಕ ಲಕ್ಷ್ಮೀನಾರಾಯಣ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿಯವರು ಹೇಗೆ ಸಹಿಸಿಕೊಂಡಿದ್ದಾರೆ ಎಂಬ ಅನುಮಾನಗಳು ಜನರಿಗಿವೆ. ಏಕೆಂದರೆ ಗೋಪಾಲ ಪೂಜಾರಿಯವರ ಮುಂದಾಳತ್ವದಲ್ಲಿ ಇತ್ತೀಚೆಗೆ ಹಲವು ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿದೆ. ಹೀಗಿರುವಾಗ ಕೇವಲ ಅಧಿಕಾರ ಹಿಡಿಯಲು ಬಿಜೆಪಿ ಜೊತೆಗೆ ಹೋಗಲು ಗೋಪಾಲ ಪೂಜಾರಿ ಹೇಗೆ ಒಪ್ಪಿದರು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಈ ಮೈತ್ರಿಯ ನೆವದಲ್ಲಿ ನಾಡದ ಪ್ರಭಾವಿ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳಲು ಗೋಪಾಲ ಪೂಜಾರಿಯವರೇ ಈ ಮೈತ್ರಿಗೆ ಹಸಿರು ನಿಶಾನೆ ತೋರಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ. ಈ ನಡುವೆ ಶಾಸಕ ಲಕ್ಷ್ಮೀನಾರಾಯಣ ಈ ’ಪೌರ ಸಮಿತಿ’ಯ ಕುರಿತು ಒಲವು ಹೊಂದಿಲ್ಲ ಎಂದು ಕೆಲ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದರೂ ಯಾಕೆ ಎಂಬುದಕ್ಕೆ ಅವರು ಅಡ್ದಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸುತ್ತಾರೆ.
ಚಿತ್ರ, ವರದಿ: ನೊಯೆಲ್ ಚುಂಗಿಗುಡ್ಡೆ