ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾನವೀಯತೆ, ಮನುಷ್ಯಪ್ರೇಮ ಭಟ್ಕಳಿಗರ ಹೃದಯವೈಶಾಲ್ಯತೆ ಜಗತ್ತಿಗೆ ಮಾದರಿ-ಡಾ.ಸವಿತಾ ಕಾಮತ್

ಮಾನವೀಯತೆ, ಮನುಷ್ಯಪ್ರೇಮ ಭಟ್ಕಳಿಗರ ಹೃದಯವೈಶಾಲ್ಯತೆ ಜಗತ್ತಿಗೆ ಮಾದರಿ-ಡಾ.ಸವಿತಾ ಕಾಮತ್

Fri, 27 Jan 2023 22:09:37  Office Staff   SOnews

ಭಟ್ಕಳ: ಭಟ್ಕಳದಲ್ಲಿ ಕಳೆದ 23 ವರ್ಷಗಳಿಂದ ವೈದ್ಯವೃತ್ತಿಯಲ್ಲಿದ್ದು ಜನರ ಸೇವೆ ಮಾಡುತ್ತಿದ್ದೇನೆ. ಆದರೆ ಭಟ್ಕಳಿಗರ ಹೃದಯ ವೈಶಾಲ್ಯತೆ, ಮಾನವೀಯತೆ, ಮನುಷ್ಯರನ್ನು ಪ್ರೀತಿಸುವ ಗುಣ ಜಗತ್ತಿನ ಬೇರೆಲ್ಲೂ ಕಡೆಗಳಲ್ಲಿ ಕಂಡು ಬರುವುದಿಲ್ಲ. ಭಟ್ಕಳದ ಜನರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮಾತ್ ಅಭಿಪ್ರಾಯಪಟ್ಟಿದ್ದಾರೆ.

.26 ಗಣರಾಜ್ಯೋತ್ಸವ ದಿನದಂದು ಇಲ್ಲಿನ ಆಲ್ ಇಂಡಿಯಾ ಪಯಾಮೆ ಇನ್ಸಾನಿಯತ್ ಫೋರಂ (ಅಖಿಲಾ ಭಾರತ ಮಾನವೀಯ ಸಂದೇಶ ವೇದಿಕೆ) ಸದಸ್ಯರು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳನ್ನು ಸಂದರ್ಶಿಸಿ ಹಣ್ಣುಹಂಪಲು ವಿತರಿಸುವುದರ ಮೂಲಕ ಗಣರಾಜ್ಯೋತ್ಸವ ಸಂಭ್ರಮ ಅಚರಿಸಿಕೊಂಡರು.

ಸಂದರ್ಭದಲ್ಲಿ ಪಯಾಮೆ ಇನ್ಸಾನಿಯತ್ ಸದಸ್ಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಡಾ.ಸವಿತಾ ತಪ್ಪು ಮಾಹಿತಿಗಳು ಬಹಳ ಬೇಗನೆ ಹರಡಿಕೊಳ್ಳುತ್ತವೆ ಯಾವಾಗಲು ಸುಳ್ಳು ಬಹಳ ಬೇಗನೆ ವೈರಲ್ ಆಗುತ್ತದೆ. ಸತ್ಯವನ್ನು ಯಾರೂ ಹೇಳುವುದಿಲ್ಲ ಮತ್ತು ಅದನ್ನು ಹಬ್ಬಿಸುವುದಿಲ್ಲ. ಭಟ್ಕಳದ ಕುರಿತಂತೆ ಏನೆಲ್ಲ ಸುಳ್ಳು ಸುದ್ದಿ ಹರಡಿಕೊಂಡಿದ್ದು ಅದು ನನ್ನನ್ನು ತುಂಬ ನೋಯಿಸಿದೆ ಎಂದ ಅವರು, ಇದೆಲ್ಲವೂ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಇಲ್ಲಿಯೆ ಹುಟ್ಟಿ ಬೆಳೆದವಳು. ನನಗೀಗ 53 ವರ್ಷಗಳು. ನನ್ನ ಜೀವನ ಹೆಚ್ಚಿನೆಲ್ಲ ಅವಧಿಯನ್ನು ಇಲ್ಲಿಯೆ ಕಳೆದಿದ್ದೇನೆ. ನಾನು ಚಿಕ್ಕಂದಿನಿಂದಲೂ ಮುಸ್ಲಿಮ ಪರಿಸರದಲ್ಲಿ ಬೆಳೆದಿದ್ದೇನೆ. ನನಗೆ ಸಾಕಷ್ಟು ಮಂದಿ ಮುಸ್ಲಿವiರೊಂದಿಗೆ ಉತ್ತಮ ಬಾಂಧವ್ಯವಿದೆ. ಭಟ್ಕಳದ ಕುರಿತು ಮಾತನಾಡುವವರು ಹೊರಗಿನವರಾಗಿದ್ದಾರೆ. ಅವರಿಗೆ ಭಟ್ಕಳದ ಮುಸ್ಲಿಮರ ಕುರಿತು ಯಾವುದೇ ಸರಿಯಾದ ತಿಳುವಳಿಕೆ ಇಲ್ಲ. ಒಂದು ವೇಳೆ ಅವರಿಗೆ ತಿಳಿವಳಿಕೆ ಇದ್ದರೆ ಹೀಗೆಲ್ಲ ಮಾತನಾಡಲ್ಲ. ಇತ್ತಿಚೆಗೆ ನಡೆದ .ಎನ್.ಎಫ್ ಎಕ್ಸ್ಪೋ  ಗೆ ನಾನು ಹೋಗಿದ್ದೆ. ಇದು ರಾಷ್ಟ್ರೀಯ ಮಟ್ಟದ ವ್ಯಾಪಾರ ಎಕ್ಸ್ಪೋ ಆ ಕುರಿತು ಯಾವುದೇ ಮಾಧ್ಯಮ ವರದಿ ಇಲ್ಲ. ಯಾವುದು ಇಲ್ಲವೂ ಅದನ್ನು ಮಾಧ್ಯಮಗಳು ಜನರಿಗೆ ತೋರಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. ಇಬ್ಬರು ವ್ಯಕ್ತಿಗಳ ನಡುವ ಉಂಟಾದ ಘರ್ಷಣೆಯನ್ನು ಹಿಂದು-ಮುಸ್ಲಿಮ್ ಘರ್ಷಣೆ ಎಂದು ತೋರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು ಇಲ್ಲಿ ನಡೆದ ಹಲವು ಅಪಘಾತಗಳಲ್ಲಿ ಮುಸ್ಲಿಮರು ಎಷ್ಟು ಮಂದಿಯ ಪ್ರಾಣ ಉಳಿಸಿದ್ದಾರೆ ಎಂಬುದು ನನಗೆ ಗೊತ್ತಿದೆ. ಹಿಂದು-ಮುಸ್ಲಿಮರ ಶಿಕ್ಷಣ ಸಂಸ್ಥೆಗಳು ಬೇರೆಬೇರೆಯಾಗಿದ್ದು ಇದರಿಂದಾಗಿ ಪರಸ್ಪರ ಕೂಡಿ ಕಲಿಯವ ವಾತವರಣ ಇಲ್ಲವಾಗಿದೆ. ಯುವಕರಿಗೆ ಭಟ್ಕಳದ ಸೌಹಾರ್ದತೆ ಬಗ್ಗೆ ಮಾಹಿತಿ ಇಲ್ಲ. 50ವರ್ಷಕ್ಕೂ ಮೇಲ್ಪಟ್ಟವರಿಗೆ ಇಲ್ಲಿನ ಪರಿಸ್ಥಿತಿಯ ಕುರಿತು ಮಾಹಿತಿ ಇದೆ. ಇದನ್ನು ಯುವಕರಲ್ಲಿ ವರ್ಗಾಯಿಸುವ ಕೆಲಸ ಆಗಬೇಕಾಗಿದೆ. ಹಿಂದು-ಮುಸ್ಲಿಮ್ ಯುವಕರು ಪರಸ್ಪರ ಸ್ನೇಹ ಬೆಳೆಸುವುದರೊಂದಿಗೆ ಎಲ್ಲ ರೀತಿಯ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕಾಗಿದೆ.

ಟಿ.ವಿ.ಮಾಧ್ಯಮಗಳಲ್ಲಿ ಬಂದಿದ್ದೆ ಸರಿ ಎಂದು ನಂಬುವ ಕಾಲದಲ್ಲಿ ಸ್ನೇಹ, ಪ್ರೀತಿ, ನಂಬಿಕೆಗಳಿಂದ ಬದುಕಬೇಕಾದರೆ ಇಂದಿನ ವಿದ್ಯಾರ್ಥಿ ಸಮುದಾಯವನ್ನು ಜಾಗೃತಗೊಳಿಸಬೇಕು. ಅವರನ್ನು ಪರಸ್ಪರ ಒಂದಾಗುವ ಅವಕಾಶವನ್ನು ಕಲ್ಪಿಸಬೇಕು ನಾವು ಇದನ್ನು ಈಗ ಮಾಡಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ವಿಷಾಧದ ಹೊರತು ನಮ್ಮಲ್ಲಿ ಬೇರೆ ದಾರಿ ಇರಲ್ಲ. ನನಗೆ ಧರ್ಮಗಳ ಬಗ್ಗೆ ಮಾಹಿತಿ ಇಲ್ಲ. ಆದರೆ ಮಾನವೀಯತೆ, ಮನುಷ್ಯತ್ವ ಏನು ಎಂಬುದು ನಾನು ಬಲ್ಲೆ. ಮಾನವೀಯತೆ ಹೊರತು ಬೇರೆ ಯಾವುದೇ ಶ್ರೇಷ್ಟವಲ್ಲ. ನನಗೆ ಭಟ್ಕಳದ ಬಗ್ಗೆ, ಭಟ್ಕಳಿಗರ ಬಗ್ಗೆ ಹೆಮ್ಮೆ. ಇದಕ್ಕಾಗಿ ಏನಾದರೂ ಮಾಡುವುದಿದ್ದರೆ ನಾನು ಮುಂಚೂಣಿಯಲ್ಲಿರುತ್ತೇನೆ ಎಂದು ಪಯಾಮೆ ಇನ್ಸಾನಿಯತ್ ನಿಯೋಗಕ್ಕೆ ತಿಳಿಸಿದ್ದಾರೆ.


Share: