ಭಟ್ಕಳ: ಮಹಾಶಿವರಾತ್ರಿಯ ಅಂಗವಾಗಿ ಶನಿವಾರ ಬೆಳಗಿನ ಜಾವ ನಗರದ ಚೋಳೇಶ್ವರದಿಂದ ಜಿಲ್ಲೆಯ ಪಂಚ ಶಿವಕ್ಷೇತ್ರಗಳಲ್ಲೊಂದಾದ ಮುರ್ಡೇಶ್ವರ ದೇವಸ್ಥಾನಕ್ಕೆ ರಂಜನ್ ಇಂಡೇನ ಎಜೆನ್ಸಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಮ್ಮಿಕೊಂಡಿದ್ದ ೧೩ನೇ ವರ್ಷದ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿತು.
ಕಳೆದ ೧೨ ವರ್ಷಗಳಿಂದ ಪಾದಯಾತ್ರೆಯನ್ನು ನಡೆಸುತ್ತಿರುವ ರಂಜನ್ ಇಂಡೇನ್ ಏಜೆನ್ಸಿಯ ವತಿಯಿಂದ ೧೩ನೇ ವರ್ಷದ ಪಾದಯಾತ್ರೆಯನ್ನು ಭಟ್ಕಳ ನಗರದ ಚೋಳೇಶ್ವರದಿಂದ ಹಮ್ಮಿಕೊಂಡಿದ್ದು ಪ್ರತಿ ವರ್ಷ ೩ ಗಂಟೆಗೆ ಚೋಳೇಶ್ವರ ದೇವಸ್ಥಾನದ ಹತ್ತಿರ ಸೇರಿ ನಾಲ್ಕು ಗಂಟೆಗೆ ಪಾದ ಯಾತ್ರೆ ಹೊರಡುತ್ತಿದ್ದರೆ, ಈ ವರ್ಷ ಭಕ್ತಾದಿಗಳು ರಾತ್ರಿ ೨ ಗಂಟೆಯಿಂದಲೇ ಚೋಳೇಶ್ವರ ದೇವಸ್ಥಾನದ ಹತ್ತಿರ ಬಂದು, ತಮ್ಮ ಪಾದಯಾತ್ರೆಯನ್ನು ಆರಂಭಿಸಿ ದೇವರ ಬಾಗಿಲು ತೆರೆಯುವುದರೊಳಗಾಗಿ ಮುರ್ಡೇಶ್ವರ ತಲುಪಿ ದೇವರ ದರ್ಶನ ಪಡೆದಿರುವುದು ವಿಶೇಷವಾಗಿತ್ತು.
ಪ್ರತಿ ವರ್ಷಕ್ಕಿಂತ ಈ ವರ್ಷ ಪಾದಯಾತ್ರಿಗಳ ಸಂಖ್ಯೆ ದ್ವಿಗುಣವಾಗಿದ್ದು ಸರತಿಯ ಸಾಲಿನಲ್ಲಿಯೇ ಬಂದು ದೇವರ ದರ್ಶನ ಪಡೆದರು.
ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳು ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಉಪಹಾರವನ್ನು ಸ್ವೀಕರಿಸಿ ನಂತರ ರಂಜನ್ ಇಂಡೇನ್ ಏಜೆನ್ಸಿಯವರು ಏರ್ಪಾಡು ಮಾಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಭಟ್ಕಳಕ್ಕೆ ಮರಳಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ಶಿವ ನಾಮಸ್ಮರಣೆ, ಶಿವ ಸ್ತುತಿಯೊಂದಿಗೆ ಸಾಗಿದ್ದು ವಿಶೇಷವಾಗಿತ್ತು.
ಈ ಬಾರಿ ಪಾದಯತ್ರೆಗಳಿಗೆ ಅನುಕೂಲವಾಗುವಂತೆ ಸಂಚಾರಿ ಶೌಚಾಲಯದ ವ್ಯವಸ್ಥೆಯನ್ನು ಕೂಡಾ ರಂಜನ್ ಇಂಡೇನ್ ಎಜೆನ್ಸಿಯ ವತಿಯಿಂದ ಕಲ್ಪಿಸಲಾಗಿದ್ದು, ದಾರಿಯುದ್ದಕ್ಕೂ ಪಾದಯಾತ್ರಿಗಳಿಗೆ ನೀರು, ಹಣ್ಣು ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.
ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಹಾಗೂ ಶಾಂತಾರಾಮ ಭಟ್ಕಳ ಪಾದಯಾತ್ರೆಯಲ್ಲಿ ಬಂದು ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಹಾಗೂ ನಾಗರೀಕರಿಗೆ ಧನ್ಯವಾದ ಹೇಳಿದ್ದಾರೆ.