ಶಿಲ್ಲಾಂಗ್: ಮಣಿಪುರದ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಹೊಸದಾಗಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಷ ಮತ್ತು ಚುರಾಚಾಂದ್ಪುರ್ ಜಿಲ್ಲೆಯ ಕಂಗೈ ಎಂಬಲ್ಲಿ ಗುಂಡಿನ ಮೊರೆತ ಕೇಳಿದೆ.
ಪಶ್ಚಿಮ ಇಂಫಾಲ ಜಿಲ್ಲೆಯ ಪೊಲೀಸ್ ಠಾಣೆಯೊಂದರಿಂದ ಶಸ್ತ್ರಾಸ್ತ್ರಗಳನ್ನು ದೋಚಲು ಗುಂಪೊಂದು ವಿಫಲ ಯತ್ನ ನಡೆಸಿದೆ. ಇಬ್ಬರು ಭಾರತೀಯ ಜನತಾ ಪಕ್ಷದ ನಾಯಕರ ಮನೆಗಳನ್ನು ಧ್ವಂಸಗೊಳಿಸಲೂ ಗುಂಪು ಯತ್ನಿಸಿದೆ.
ಹಿಂಸಾಚಾರವನ್ನು ತಡೆಯಲು ಸೇನೆ, ಅಸ್ಸಾಮ್ ರೈಫಲ್ಸ್ ಮತ್ತು ಮಣಿಪುರ ಕ್ಷಿಪ್ರ ಕಾರ್ಯ ಪಡೆಯ ಸಿಬ್ಬಂದಿ ಇಂಫಾಲದಲ್ಲಿ ಮಧ್ಯರಾತ್ರಿಯವರೆಗೂ ಜಂಟಿ ಪಥ ಸಂಚಲನ ನಡೆಸಿದರು.
ಸುಮಾರು 1,000 ದಷ್ಟಿದ್ದ ಜನರ ಗುಂಪೊಂದು ಇಂಫಾಲದಲ್ಲಿ ಪ್ಯಾಲೇಸ್ ಕಾಂಪೌಂಡ್ನಲ್ಲಿ ಬೆಂಕಿ ಹಚ್ಚಲು ವಿಫಲ ಯತ್ನ ನಡೆಸಿತು. ಗುಂಪನ್ನು ಚದುರಿಸಲು ಕ್ಷಿಪ್ರ ಕಾರ್ಯ ಪಡೆಯು ಅಶ್ರುವಾಯು ಸಿಡಿಸಿದಾಗ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದಾಗ ಇಬ್ಬರು ಗಾಯಗೊಂಡಿದ್ದಾರೆ.
ಇಂಫಾಲ ಪೂರ್ವ ಜಿಲ್ಲೆಯ ತೊಂಗ್ಲು ಎಂಬಲ್ಲಿ ಸುಮಾರು ಮುನ್ನೂರರಷ್ಟಿದ್ದ ಉದ್ರಿಕ್ತ ಜನರ ಗುಂಪೊಂದು ಬಿಜೆಪಿ ಶಾಸಕ ತೊಂಗ್ಟಮ್ ಬಿಸ್ವಜಿತ್ ಸಿಂಗ್ ಮನೆಗೆ ಬೆಂಕಿ ಹಚ್ಚಲು ಯತ್ನಿಸಿತು.
ಕ್ಷಿಪ್ರ ಕಾರ್ಯ ಪಡೆಯ ತಂಡಗಳು ಬಳಿಕ ಗುಂಪನ್ನು ಚದುರಿಸಿದವು. ಇಂಫಾಲ ಪೂರ್ವ ಜಿಲ್ಲೆಯ ಸಿಂಗಜಾಮೆಯಲ್ಲಿರುವ ಬಿಜೆಪಿ ಕಚೇರಿಯನ್ನು ಮತ್ತು ಇಂಫಾಲ ಪಶ್ಚಿಮದಲ್ಲಿರುವ ಬಿಜೆಪಿ ನಾಯಕಿ ಅಧಿಕಾರಿಮಯುಮ್ ಶಾರದಾ ದೇವಿಯ ಮನೆಯನ್ನು ಧ್ವಂಸಗೊಳಿಸಲೂ ಗುಂಪು ಯತ್ನಿಸಿತು. ಎರಡೂ ಕಡೆಗಳಿಗೆ ಧಾವಿಸಿದ ಭದ್ರತಾ ಪಡೆಗಳು ದುಷ್ಕರ್ಮಿಗಳ ಯತ್ನಗಳನ್ನು ವಿಫಲಗೊಳಿಸಿದವು.
ಇಂಫಾಲ ಪಶ್ಚಿಮ ಜಿಲ್ಲೆಯ ಇರಿಂಗ್ಬಾಮ್ ಪೊಲೀಸ್ ಠಾಣೆಯಲ್ಲಿ ದಾಂಧಲೆಗೈಯಲು ಮತ್ತು ಶಸ್ತ್ರಾಸ್ತ್ರಗಳನ್ನು ದೋಚಲು ಗುಂಪೊಂದು ಯತ್ನಿಸಿತು. ಅದನ್ನೂ ಕ್ಷಿಪ್ರ ಕಾರ್ಯ ಪಡೆಗಳು ವಿಫಲಗೊಳಿಸಿದವು.
ಮಣಿಪುರದಲ್ಲಿ ಕಳೆದ ತಿಂಗಳ ಆದಿಭಾಗದಲ್ಲಿ ಆರಂಭಗೊಂಡಿರುವ ಬಹುಸಂಖ್ಯಾತ ಮೈತೈ ಮತ್ತು ಅಲ್ಪಸಂಖ್ಯಾತ ಕುಕಿ ಜನಾಂಗೀಯರ ನಡುವಿನ ಜನಾಂಗೀಯ ಸಂಘರ್ಷದಲ್ಲಿ ಈ ವರೆಗೆ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 300ಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸುಮಾರು 60,000 ಮಂದಿ 350 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.