ಕಾರವಾರ : ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಭಿಕ್ಷಾಟನೆ, ಮಕ್ಕಳ ಕಾಣೆಯಾಗುವಿಕೆ, ಅಪಹರಣ ತಡೆಗಟ್ಟಲು ಹಾಗೂ ಮಕ್ಕಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಪ್ರತಿಯೊಂದು ಇಲಾಖೆಗಳು ಸಹಕಾರ, ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಅಶೋಕ ಯರಗಟ್ಟಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಆರ್‍ಟಿಇ, ಪೋಕ್ಸೋ ಕಾಯ್ದೆ 2012, ಬಾಲನ್ಯಾಯ ಕಾಯ್ದೆ 2015ರ ಅನುಷ್ಠಾನದ ಕುರಿತು ಜಿಲ್ಲೆಯ ಎಲ್ಲ ಭಾಗಿದಾರರೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳ ಹಕ್ಕುಗಳ ರಕ್ಷಣಾ ವಿಚಾರದಲ್ಲಿ ಪ್ರತಿಯೊಂದು ಇಲಾಖೆಗಳು ಮುತುವರ್ಜಿವಹಿಸಿ ಮಕ್ಕಳಿಗೆ ಮಾಹಿತಿ ಮತ್ತು ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡಬೇಕೆಂದರು.
ಭಿಕ್ಷಾಟನೆ, ಬಾಲಕಾರ್ಮಿಕ, ಅಪಹರಣದಂತಹ ಸಂದರ್ಭದಲ್ಲಿ ಮಕ್ಕಳು ಸಿಕ್ಕಾಗ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯೊಂದಿಗೆ ಪೋನ್ ನಂಬರ್ ಒಳಗೊಂಡ ಬೋರ್ಡ್ ಇರುವ ಕಂಟ್ಯಾಕ್ಟ್ ಪಾಯಿಂಟ್ ತೆರೆದು ಕಾಣೆಯಾದ ಮಕ್ಕಳನ್ನು ಕೂಲಕುಂಶವಾದ ವಿಚಾರಣೆಯ ನಂತರ ಪೋಷಕರಿಗೆ ಒಪ್ಪಿಸಿ, ಮತ್ತು ಪೋಷಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಹೇಳಿದರು.
ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರತಿಯೊಂದು ಇಲಾಖೆಯು ಹೊಣೆಗಾರರಾಗಿರುವದರಿಂದ, ಬಾಲ್ಯವಿವಾಹ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡುವಂತಹ ಕಾರ್ಯವಾಗಬೇಕು. ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಭಿಕ್ಷಾಟಣೆ, ಮಕ್ಕಳ ಕಾಣೆಯಾಗುವಿಕೆÉ, ಅಪಹರಣ ತಡೆಗಟ್ಟಲು ಹಾಗೂ ಮಕ್ಕಳ ರಕ್ಷಣೆ ಮಾಡುವ ಕುರಿತು ಶಿಕ್ಷಣ ಇಲಾಖೆ, ಪೊಲೀಸ್‍ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆಗಳು ಪ್ರಮುಖವಾಗಿ ಮುಂಚೂಣಿ ಸ್ಥಾನದಲ್ಲಿ ನಿಂತು ಮಕ್ಕಳ ರಕ್ಷಣೆ ಮಾಡಬೇಕೆಂದರು.
ಸಭೆಯಲ್ಲಿ ಹಾಜರಿದ್ದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ 1098, 112 ಸಹಾಯವಾಣಿಯ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಮಕ್ಕಳ ಶಿಕ್ಷಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕುಡಿಯುವ ನೀರು, ಶೌಚಾಲಯ, ಪೌಷ್ಠಿಕ ಆಹಾರ ವಿತರಣೆ, ನ್ಯಾಪಕಿನ್ ವಿತರಣೆ, ಆರೋಗ್ಯ ಸವಲತ್ತುಗಳು, ದೌರ್ಜನ್ಯ ಪೀಡಿತ ಮಕ್ಕಳಿಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತಾಗಲು ಮಕ್ಕಳ ಸ್ನೇಹಿ ವಾತಾವರಣ ಪೊಲೀಸ್ ಠಾಣೆಗಳು ನಿರ್ಮಾಣವಾಗಬೇಕು. ಪ್ರತಿ ಹಳ್ಳಿಗೂ ಸಾರಿಗೆ ಬಸ್ ಸಂಚಾರವಾಗಬೇಕು. ಪ್ರಮುಖವಾಗಿ ಕಾನೂನು ನೆರವು ಅವರಿಗೆ ಸಿಗುವಂತಾಗಬೇಕೆಂದರು.
ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸವಲತ್ತುಗಳ ವಿತರಣೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯ ಕುರಿತಾದ ವಿಚಾರದಲ್ಲಿ ಯೋಜನಾ ವರದಿ ತಯಾರಿಸಿ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಗಾ ಎಂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್, ಡಿವೈಎಸ್‍ಪಿ ವ್ಯಾಲೆಂಟೈನ್ ಡಿಸೋಜಾ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಜಯಶ್ರೀ ಚನಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ,ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾಂತಪುರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೋನಲ್ ಐಗಳ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು ಇದ್ದರು.