ಮಂಗಳೂರು: ನಗರದ ಹೊರವಲಯದ ಎಸ್ ಇ ಝೆಡ್ ವ್ಯಾಪ್ತಿಯ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ.
ಬಜ್ಪೆ ಶ್ರೀ ಉಲ್ಕಾ ಎಲ್ಎಲ್ ಪಿ ಮೀನು ಸಂಸ್ಕರಣಾ ಘಟಕದ ಟ್ಯಾಂಕ್ ಸ್ವಚ್ಚಗೊಳಿಸುತ್ತಿರುವ ವೇಳೆ ವಿಷಾನಿಲ ಸೋರಿಕೆಯಾಗಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಮಿರುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಸೇರಿ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಸ್ವಚ್ಚಗೊಳಿಸಲು ಕೆಳಗಿಳಿದಿದ್ದನು. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದನು. ಆತನನ್ನು ರಕ್ಷಿಸಲು ಸುಮಾರು ಎಂಡು ಮಂದಿ ಕಾರ್ಮಿಕರು ಹೋಗಿದ್ದು ಎಲ್ಲರಿಗೂ ಉಸಿರಾಟ ತೊಂದರೆಯಾಗಿದೆ. ಅಸ್ವಸ್ಥಗೊಂಡವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಂಸ್ಕರಣ ಘಟಕ ಮುಂಬೈ ಮೂಲದ ವ್ಯಕ್ತಿಗೆ ಸೇರಿದ್ದಾಗಿದ್ದು, ಮಾಲಕನ ವಿರುದ್ಧ 304 ಸೆಕ್ಷನ್ ಅಡಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.