ಪಡುಬಿದ್ರಿ, ಡಿಸೆಂಬರ್ 23: ಇಲ್ಲಿನ ಎರ್ಮಾಳು ತೆಂಕ ಕರಾವಳಿ ಫ್ರೆಂಡ್ಸ್ ಇದರ ಬೆಳ್ಳಿಹಬ್ಬದ ಪ್ರಯುಕ್ತ ಕಲಾ ದರ್ಬಾರ್ ೨೦೦೯ ಕಾರ್ಯಕ್ರಮವನ್ನು ಇದೇ ೨೬ರಂದು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಸಿದರು.
ಮಹಾರಾಷ್ಟ್ರದ ಎಸಿಪಿ ಪ್ರಕಾಶ್ ಭಂಡಾರಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಲಾಲಾಜಿ ಮೆಂಡನ್ ಅಧ್ಯಕ್ಷತೆ ವಹಿಸಲಿದ್ದು, ಮಣಿಪಾಲ ಮಾಹೆಯ ಪ್ರೊಪೆಸರ್ ಡಾ.ನಾರಾಯಣ ಎ ಪ್ರಧಾನ ಭಾಷಣ ಮಾಡಲಿರುವರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಂಸ್ಥೆಯು ತನ್ನ ಸೇವಾ ಕಾರ್ಯ ಚಟುವಟಿಕೆಗಳನ್ನು ೨೫ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸಿದೆ. ಇದೀಗ ಬೆಳ್ಳಿಹಬ್ಬ ಆಚರಣೆಯ ಸಂಭ್ರಮದಲ್ಲಿರುವ ಸಂಸ್ಥೆಯು ಜಿಲ್ಲೆಯಲ್ಲೇ ಎಲ್ಲಾ ಕಲಾವಿದರನ್ನು ಒಗ್ಗೂಡಿಸುವ ಕಾರ್ಯಕ್ರಮವನ್ನು ೨೬ರಂದು ನಡೆಸುವುದಾಗಿ ಅವರು ವಿವರಿಸಿದರು.
ಉಡುಪಿ ಜಿಲ್ಲೆಯಲ್ಲೇ ಪ್ರಥಮ ಎನಿಸುವ ಕಲಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ, ಎಸ್.ಟೀಮ್‌ನಿಂದ ಗಾನಗಂಗೆ ಸಂಗೀತ ರಸಮಂಜರಿ ಕಾರ್ಯಕ್ರಮ. ಹಾಸ್ಯ ರಸದೌತಣ, ಖಾಸಗಿ ಚಾನೆಲ್‌ನ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಅವರು ವಿವರಿಸಿದರು.
ಬೆಳ್ಳಿಹಬ್ಬ ಮಹೋತ್ಸವ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್, ಎಸ್.ಟೀಮ್ ಆರ್ಗನೈನೈಸಿಂಗ್ ಗ್ರೂಪ್‌ನ ಆರ್.ಬಿ. ಸಂದೀಪ್, ಸಂದೀಪ್ ಜೆ.ಕೆ ಹಾಜರಿದ್ದರು.
ವರದಿ: ಹಮೀದ್, ಪಡುಬಿದ್ರಿ.