ಭಟ್ಕಳ : ದಿ ನ್ಯೂ ಇಂಗ್ಲೀಷ್ ಸ್ಕೂಲ್ ಭಟ್ಕಳದಲ್ಲಿ ಓದುತ್ತಿರುವ 8 ನೇ ವರ್ಗದ 92 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಬುಕ್ಸ್ ವಿತರಣೆ ಶುಕ್ರವಾರ ನಡೆಯಿತು.
ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಆಫ್ರಿಕಾದ ಉಗಾಂಡಾ ದೇಶದಲ್ಲಿ ನೆಲೆಸಿರುವ ಸಿಗ್ಮಾ ಡಾಟಾ ಮತ್ತು ಕಂಪ್ಯೂಟರ್ ನ ನಿರ್ದೇಶಕರಾದ ಭಟ್ಕಳದ ಲಚ್ಮಯ್ಯ ಮೊಗೇರ ಸಿದ್ಧನಮನೆ ಇವರ ಪ್ರಾಯೋಜಕತ್ವದಲ್ಲಿ ಸಮವಸ್ತ್ರ ಹಾಗೂ ಪಟ್ಟಿಪುಸ್ತಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಟ್ಕಳ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುರೇಶ ನಾಯಕ್, ಅಧ್ಯಕ್ಷತೆ ವಹಿಸಿ ಲಚ್ಮಯ್ಯ ಮೊಗೇರ ಸಿದ್ಧನಮನೆಯವರಂತೆ ಪ್ರತಿಯೊಬ್ಬ ವ್ಯಕ್ತಿಗೂ ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಮನೋಭಾವ ಬರಬೇಕೆಂದು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಿಕ್ಷಕರಾದ ಶಂಭು ಗೌಡ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಶಿರೂರು ಅವರು ಮಾತನಾಡಿ , ಲಚ್ಮಯ್ಯ ಮೊಗೇರ ಸಿದ್ಧನಮನೆಯವರು ಕಳೆದ ಐದಾರು
ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿ ಗಳಿಗೆ ಎಲೆ ಮರೆಯ ಕಾಯಿಯಂತೆ ಯಾವುದೇ ಪ್ರಚಾರ ಬಯಸದೆ ಕೊಡುಗೆ ನೀಡುತ್ತಿರುವುದನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಪಾಲಕರು , ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಪರಮಯ್ಯ ವಂದಿಸಿದರು. ಶಿಕ್ಷಕ ಪಾಂಡುರಂಗ ಅಳ್ವೆಗದ್ದೆ ಕಾರ್ಯಕ್ರಮ ನಿರೂಪಿಸಿದರು.