ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಸಯನೈಡ್ ಕಿಲ್ಲಲ್ ಮೋಹನ್ ಬಂಧನ ನ.2 ರ ವರೆಗೆ ವಿಸ್ತರಣೆ

ಬಂಟ್ವಾಳ: ಸಯನೈಡ್ ಕಿಲ್ಲಲ್ ಮೋಹನ್ ಬಂಧನ ನ.2 ರ ವರೆಗೆ ವಿಸ್ತರಣೆ

Wed, 28 Oct 2009 03:12:00  Office Staff   S.O. News Service
ಬಂಟ್ವಾಳ, ಅ.27: ಸಯನೈಡ್ ಕಿಲ್ಲರ್ ಮೋಹನ್ ಕುಮಾರ್ ಯಾನೆ ಆನಂದನನ್ನು ಬಂಟ್ವಾಳ ಪೊಲೀಸರು ಮಂಗಳವಾರ ಬಿ.ಸಿ.ರೋಡಿನ ಜೆ‌ಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ.೨ರ ವರೆಗೆ ಮತ್ತೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಅ.೧೮ರಂದು ಪೊಲೀಸರ ಕೈಗೆ ಸೆರೆ ಸಿಕ್ಕಿದ್ದ ಹಂತಕ ಮೋಹನ್ ಕುಮಾರ್‌ನನ್ನು ಪೊಲೀಸರು ಅ.೨೨ರಂದು ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದು, ೨೭ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಬಳಿಕ ವಿಚಾರಣೆಯನ್ನು ತೀವ್ರಗೊಳಿಸಿದ ತನಿಖಾಧಿಕಾರಿ ಪುತ್ತೂರು ಎ‌ಎಸ್ಪಿ ಡಾ.ಚಂದ್ರಗುಪ್ತಾ, ಮೋಹನ್ ತೊಕ್ಕೊಟ್ಟಿನ ಫೈನಾನ್ಸ್‌ನಲ್ಲಿ ಅಡವಿರಿಸಿದ್ದ ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಪರಿಮಾ ರುವಿನ ಅನಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಹಾಸನಕ್ಕೆ ಕರೆದೊಯ್ದು ವಿಚಾರಣೆ ನಡೆ ಸಲಾಗಿತ್ತು. ಈ ನಡುವೆ ಬಂಟ್ವಾಳ ಬಾಳೆಪುಣಿಯ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬಾಕೆಯನ್ನು ಕೊಲೆಗೈದಿರುವುದನ್ನು ಮೋಹನ್ ಒಪ್ಪಿಕೊಂಡಿದ್ದ. ೧೯ ಯುವತಿಯರನ್ನು ಕೊಲೆಗೈದಿರುವ ಮೋಹನ್ ಮತ್ತಷ್ಟು ಕೊಲೆ ನಡೆಸಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ತನಿಖೆ ತೀವ್ರಗೊಳಿಸುವ ನಿಟ್ಟಿನಲ್ಲಿ ಮಂಗಳವಾರ ಅಪರಾಹ್ಣ ೩ ಗಂಟೆಯ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದ್ದ ಮೋಹನ್‌ನನ್ನು ಮತ್ತೆ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧಿಶರಾದ ಕೆ.ಪಿ.ದಿನೇಶ್, ಹಂತಕ ಮೋಹನ್‌ನನ್ನು ನ.೨ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಪುತ್ತೂರು ಎ‌ಎಸ್ಪಿ ಡಾ.ಚಂದ್ರಗುಪ್ತಾ, ವೃತ್ತ ನಿರೀಕ್ಷಕ ನಂಜುಂಡೇ ಗೌಡ, ಠಾಣಾಧಿಕಾರಿ ಶಿವಪ್ರಕಾಶ್, ವಿವೇಕಾನಂದ ಮತ್ತು ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.

 ಸರಣಿ ಹಂತಕ ಶಿಕ್ಷಕ ಮೋಹನನ ಪಾತಕ ಕೃತ್ಯಗಳ ಬಗ್ಗೆ ತಿಳಿಯಲು ಆತನನ್ನು ನ್ಯಾಕೋ ಅನಾಲಿಸಿಸ್ (ಮಂಪರು ಪರೀಕ್ಷೆ)ಗೆ ಒಳಪಡಿಸುವ ಮೂಲಕ ಹೆಚ್ಚಿನ ವಿವರ ಪಡೆಯಬಹುದು. ಆತನ ಈ ಕೃತ್ಯಗಳಿಗೆ ಮೂಲ ಕಾರಣಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು ಎಂದು ನಗರದ ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಾರೆ.
 
ತಜ್ಞರಿಗೂ ಸವಾಲಾದ ಸರಣಿ ಹಂತಕ ಮೋಹನನ ಪ್ರಕರಣ: ಮೋಹನ ಕೊಲೆ ಮಾಡಿರುವುದನ್ನು ಹೇಳುವುದಾದರೆ ಇದೊಂದು ಸಂಕೀರ್ಣ ಪ್ರಕರಣ. ಸಾಮಾನ್ಯವಾಗಿ ಸೈಕೋಪಾತ್‌ಗಳೆನಿಸಿಕೊಂಡ ವರ ವಿಕೃತ ಮನೋಪ್ರವೃತ್ತಿ ಅವರ ವರ್ತನೆಗಳಲ್ಲಿ ಕಂಡು ಬರುತ್ತದೆ. ಮೋಹನನ ಬಗ್ಗೆ ಬಂದಿರುವ ವರದಿಗಳನ್ನು ಗಮನಿಸಿದಾಗ ಆತ ಪೂರ್ಣವಾಗಿ ಸೈಕೋಪಾತ್ ಆಗಿದ್ದ ಎನ್ನುವುದಕ್ಕೆ ಸಾಧ್ಯವಿಲ್ಲ. ಮನೋವೈಕಲ್ಯದಿಂದ ಉಂಟಾದ ಅಸಮತೋಲನ ಎನ್ನಲೂ ಸಾಧ್ಯವಿಲ್ಲ. ಆತ ಏಕೆ ಈ ರೀತಿ ಯುವತಿಯರನ್ನು ಕೊಲೆಗೈದ ಎನ್ನುವುದು ಮಂಪರು ಪರೀಕ್ಷೆಯ ಮೂಲಕ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ರವೀಶ್ ತುಂಗಾ ಅಭಿಪ್ರಾಯ ಪಡುತ್ತಾರೆ.

ಪ್ರಕರಣವನ್ನು ಗಮನಿಸಿದಾಗ ಆತನ ವಿಕ್ಷಿಪ್ತ ಮನೋಪ್ರವೃತ್ತಿಯ ಲಕ್ಷಣಗಳು ಕಂಡು ಬರುತ್ತವೆ. ಕೌಟುಂಬಿಕ ಹಿನ್ನೆಲೆ, ಬಾಲ್ಯ, ಸುಪ್ತವಾಗಿರುವ ಇಚ್ಛೆಗಳು, ಈ ಸಂದರ್ಭದಲ್ಲಿ ಉಂಟಾಗಿರುವ ಆಘಾತಗಳು ವ್ಯಕ್ತಿಯನ್ನು ಸೈಕೋಪಾತಾಗಿ ಪರಿವರ್ತಿಸುವ ಸಾಧ್ಯತೆಗಳಿವೆ. ಅವರು ಉದ್ವೇಗದಿಂದ ಅಥವಾ ಬುದ್ಧಿವಂತಿಕೆಯಿಂದಲೂ ಕಾರ್ಯ ಸಾಧಿಸುತ್ತಾರೆ. ಮೋಹನನ ಘಟನೆ ಹೇಗೆ ಆಗಿದೆ ಎನ್ನುವುದನ್ನು ತಿಳಿಯಲು ಆತನ ಮಂಪರು ಪರೀಕ್ಷೆ ಅಗತ್ಯವಾಗಬಹುದು ಎಂದು ಮಾನಸಿಕ ತಜ್ಞೆ ಡಾ. ವೃಜಾ ಶಂಕರ್ ಹೇಳುತ್ತಾರೆ. 


Share: