ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಬಿಜೆಪಿ ಸರಕಾರದಿಂದ ಕರಾವಳಿಯ ಮೀನುಗಾರರಿಗೆ ಮೋಸ : ಐವಾನ್ ಡಿಸೋಜಾ

ಭಟ್ಕಳ: ಬಿಜೆಪಿ ಸರಕಾರದಿಂದ ಕರಾವಳಿಯ ಮೀನುಗಾರರಿಗೆ ಮೋಸ : ಐವಾನ್ ಡಿಸೋಜಾ

Fri, 16 Dec 2022 06:26:59  Office Staff   S O News service

ಭಟ್ಕಳ: ರಾಜ್ಯ ಬಿಜೆಪಿ ಸರಕಾರದಿಂದ ಕರ್ನಾಟಕ ಕರಾವಳಿಯ ಮೀನುಗಾರರಿಗೆ ಮೋಸ ಮಾಡಲಾಗಿದ್ದು, ಇಲ್ಲಿನ ಮೀನುಗಾರರ ಸಮಸ್ಯೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೂಲಕ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿ ನ್ಯಾಯಕ್ಕಾಗಿ ಆಗ್ರಹಿಸಲಿದೆ ಎಂದು ಕೆಪಿಸಿಸಿ ವಕ್ತಾರ, ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಐವಾನ್ ಡಿಸೋಜಾ ಹೇಳಿದ್ದಾರೆ.

ಅವರು ಬುಧವಾರ ಭಟ್ಕಳದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರಾವಳಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ಜೀವನಾಧಾರಕ್ಕೆ ಅವಲಂಬಿಸಿಕೊಂಡಿದ್ದಾರೆ. ಬಿಜೆಪಿ ಮೀನುಗಾರರನ್ನು ವೋಟಿಗಾಗಿ ಬಳಸಿಕೊಂಡು ನಿರ್ಲಕ್ಷ್ಯ ಮಾಡಿದೆ. ಬಿಜೆಪಿಯ ಮಂತ್ರಿಗಳು, ಶಾಸಕರು ಮೀನುಗಾರರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಮೀನುಗಾರಿಕೆಗೆ ಸಂಬಂಧ ಇಲ್ಲದ, ಆ ಬಗ್ಗೆ ಅರಿವಿಲ್ಲದ ವ್ಯಕ್ತಿಯನ್ನು ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ನಾಡದೋಣಿಗಳಿಗೆ ಸಿದ್ದರಾಮಯ್ಯನವರ ಸರಕಾರದಲ್ಲಿ ಎಷ್ಟು ಸೀಮೆ ಎಣ್ಣೆಯನ್ನು ಒದಗಿಸಲಾಗುತ್ತಿತ್ತೋ ಅಷ್ಟೇ ಸೀಮೆ ಎಣ್ಣೆಯನ್ನು ಇಂದಿಗೂ ನೀಡಲಾಗುತ್ತಿದೆ.

ನಾಡದೋಣಿಗಳಿಗೆ ತಿಂಗಳಿಗೆ 500ಲೀ. ಸೀಮೆ ಎಣ್ಣೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ. ಕರಾವಳಿಯಲ್ಲಿ ಬೋಟುಗಳ ಡಿಸೇಲ್ ಕಥೆಯೂ ಅಷ್ಟೇ. ಮಂಗಳೂರು ಮೀನುಗಾರಿಕಾ ಪ್ರದೇಶ ಕುಸಿಯುವ ಭೀತಿಯಲ್ಲಿದ್ದರೂ ಸರಕಾರ ಯಾವುದೇ ಅನುದಾನವನ್ನು ಒದಗಿಸಿಲ್ಲ.

ಮೀನುಗಾರರ ಹೆಸರಿನಲ್ಲಿ ಬೀದರ್, ಬೆಳಗಾವಿಯಂತಹ ಪ್ರದೇಶಗಳಲ್ಲಿ ನೂರಾರು ಮನೆಗಳನ್ನು ವಿತರಿಸಲಾಗಿದೆ. ಆದರೆ ಮೀನುಗಾರರೇ ಇರುವ ಕರ್ನಾಟಕ ಕರಾವಳಿಯಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 15, 25ರಂತೆ ಮನೆಗಳನ್ನು ನೀಡಲಾಗಿದೆ. ಯಾಕೆ ಹೀಗೆ ಮಾಡಲಾಗಿದೆ ಎನ್ನುವ ಬಗ್ಗೆ ಯಾರೊಬ್ಬರೂ ಉತ್ತರಿಸುತ್ತಿಲ್ಲ. ಮೀನುಗಾರರು, ಬೆಸ್ತರು ನಮ್ಮ ಕಡೆ ಎಂದು ಬಿಜೆಪಿಯವರು ಮಾತನಾಡುತ್ತಾರೆ. ಬಿಜೆಪಿ ಕೇವಲ ಮೀನುಗಾರರ ಮತ ಕೇಳುವ ಕೆಲಸವನ್ನಷ್ಟೇ ಮಾಡುತ್ತಿದ್ದು, ಸರಕಾರ ಬಂದರು ಅಭಿವೃದ್ಧಿಗೆ, ಮೀನುಗಾರರಿಗೆ ಏನಾದರೂ ಕೊಟ್ಟಿದ್ದರೆ ಶ್ವೇತ ಪತ್ರದ ಮೂಲಕ ಮುಂದೆ ಬರಬೇಕು ಎಂದು ಆಗ್ರಹಿಸಿದರು. ಕರಾವಳಿ ಮೀನುಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಮೀನುಗಾರ ಸಂಘಟನೆಗಳು ಒಂದಾಗಿದ್ದು, ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಈ ಬಗ್ಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಿದ್ದಾರೆ. ಅಲ್ಲದೇ ಕರಾವಳಿಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಲಿದ್ದು, ಈಗಾಗಲೇ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ ಅಹವಾಲುಗಳನ್ನು ಆಲಿಸಲಾಗಿದೆ ಎಂದು ವಿವರಿಸಿದರು. 

ಹನಿಹನಿ ರಕ್ತಕ್ಕೆ ನ್ಯಾಯಕೊಡುವ ಅನಂತ ಎಲ್ಲಿ?:
ಕಳೆದ ಪರೇಶ ಮೇಸ್ತ ಸಾವಿನ ಸಂದರ್ಭದಲ್ಲಿ ಹನಿ ಹನಿ ರಕ್ತಕ್ಕೆ ನ್ಯಾಯ ಕೊಡುವುದಾಗಿ ಹೇಳಿಕೊಂಡಿದ್ದ ಸಂಸದ ಅನಂತಕುಮಾರ ಹೆಗಡೆ, ಇದೀಗ ಸಿಬಿಐ ವರದಿಯ ನಂತರ ಎಲ್ಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಐವಾನ್ ಡಿಸೋಜಾ ಪ್ರಶ್ನಿಸಿದರು.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಚಿತ್ರಾಪುರ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ಅಧ್ಯಕ್ಷ ವಿಠ್ಠಲ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ, ಜಯಲಕ್ಷ್ಮೀ ಗೊಂಡ, ಫರ್ಜಾನಾ, ಶೈನಾ ಮೊದಲಾದವರು ಉಪಸ್ಥಿತರಿದ್ದರು. 


Share: